ನೀಲಿ ಕೊಡೆಯ ಕೆಳಗೆ

0
41

ಏನೆಲ್ಲ ಕೊಡುಗೆಗಳು. ಕೈಗಳನ್ನು ಮೇಲಕ್ಕೆತ್ತಿ ಆಕಾಶದತ್ತ ಚಾಚಿ, ದೇವರನ್ನು ಪ್ರಾರ್ಥಿಸುವುದು ಎಲ್ಲ ಧರ್ಮಾನುಯಾಯಿಗಳ ಸಾಮಾನ್ಯ ಆಚರಣೆ. ದೇವರು ಮೇಲೆ ಇದ್ದಾನೆ ಎಂಬುದೇ ನಮ್ಮೆಲ್ಲರ ದೃಢ ವಿಶ್ವಾಸ. ಅವನ ಕೃಪಾಕಟಾಕ್ಷದಲ್ಲಿ ಸಮಸ್ತ ಪ್ರಪಂಚ ನಡೆಯುತ್ತಿದೆ. ಅದಕ್ಕಾಗಿ ದಾರ್ಶನಿಕರು ನಾವು ಸದಾ ದೇವರಿಗೆ ಋಣಿಯಾಗಿರಬೇಕೆಂದು ಉಪದೇಶಿಸುತ್ತ ಅವನು ನಮಗೆ ನೀಡಿದ ಕಾಣಿಕೆಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದು' ಹೇಳಿದ್ದಾರೆ. ದೇವರು ಮಾನವನಿಗೆ ಅಗಣಿತ ಕೊಡುಗೆಗಳನ್ನು ನೀಡಿದ್ದಾನೆ. ಕುರಾನಿನ ೧೦ನೆಯ ಅಧ್ಯಾಯದ ೪ ಮತ್ತು ೮ ನೆಯ ವಚನಗಳಲ್ಲಿ ದೇವರು ನಮಗೆ ದಯಪಾಲಿಸಿರುವ ಅಗಣಿತ ಕೊಡುಗೆಗಳ ವಿವರ ಇದೆ. ಮಾನವನನ್ನು ವೀರ್ಯದ ಮೂಲಕ ಸೃಷ್ಟಿಸಲಾಗಿದೆ. ಪಶುಗಳನ್ನು ಸೃಷ್ಟಿಸಿ ಅವುಗಳಲ್ಲಿ ನಿಮಗಾಗಿ ಉಡುಗೆ ಇಡಲಾಗಿದೆ. ಜೊತೆಗೆ ಅವುಗಳಿಂದ ಇತರ ಇತರ ಲಾಭಗಳೂ ಇವೆ. ಅವುಗಳಲ್ಲಿ ಕೆಲವನ್ನು ನಿಮ್ಮ ಆಹಾರಕ್ಕಾಗಿ ಸೃಷ್ಟಿಸಲಾಗಿದೆ. ಅವುಗಳಲ್ಲಿ ಸೌಂದರ್ಯ ಕಲ್ಪಿಸಲಾಗಿದೆ. ನಿಮಗೆ ಯಾವುದೇ ತೊಂದರೆ ಪ್ರಯಾಸ ಇಲ್ಲದೆ ಬೇರೆ ಬೇರೆ ಪ್ರದೇಶಗಳಿಗೆ ನಿಮ್ಮ ಸರಕು ಸರಂಜಾಮನ್ನು ತಲುಪಿಸಲು ಆದೇಶಿಸಲಾಗಿದೆ. ನೀವು ಅವುಗಳ ಮೇಲೆ ಸವಾರಿ ನಡೆಸಬೇಕು ಎಂದು ಕುದುರೆ, ಹೇಸರಗತ್ತೆಗಳನ್ನು ಸೃಷ್ಟಿಸಲಾಗಿದೆ. ಇನ್ನು ನಿಮಗೆ ಗೊತ್ತಿಲ್ಲದ ಹಲವಾರು ಸಂಗತಿಗಳನ್ನು ನಿರ್ಮಿಸಲಾಗಿದೆ..' ಈ ಕಾಣಿಕೆಗಳ ಸಾರ ಅಂದರೆ ಮೊದಲನೆಯದು ಮನುಷ್ಯನಿಗೆ ಅದ್ವಿತೀಯ ಅಪೂರ್ವವಾದ ವ್ಯಕ್ತಿತ್ವ ನೀಡಿದ್ದು, ಎರಡನೆಯದಾಗಿ ಕ್ರಮಬದ್ಧವಾದ ಚಲನವಲನ ದಯಪಾಲಿಸಿದ್ದು, ಮೂರನೆಯದಾಗಿ ಅವನ ಜಿಜ್ಞಾಸೆಗಾಗಿ ಮನುಷ್ಯನಿಗೆ ತಿಳಿಯಲಾರದದ್ದನ್ನು ಸೃಷ್ಟಿಸಿರುವುದು. ಇದಲ್ಲದೆ ದೇವರು ಮನುಷ್ಯನಿಗೆ ನೀಡಿರುವ ಅಪಾರ ಕೊಡುಗೆಗಳನ್ನು ಕುರಾನಿನ ೧೫ ಅಧ್ಯಾಯಗಳಲ್ಲಿ ವರ್ಣಿಸಲಾಗಿದೆ. (ಇಬ್ರಾಹಿಮ, ಅನ್ ಫಾಲ, ಇಮ್ರಾನ್, ಬಕರ, ಅನ್ ಆಮ, ಬನಿ ಇಸ್ರಾಯಿಲ್ ಮುಂತಾದವುಗಳು).. ಕುರಾನಿನ ಇಬ್ರಾಹಿಮ ಅಧ್ಯಾಯದ ೮೪ನೇ ವಚನದಲ್ಲಿನೀವು ಹೇಳಿದ ಎಲ್ಲವನ್ನೂ ಅಲ್ಲಾಹನು ನೀಡಿದ್ದಾನೆ. ನೀವು ಅವನ ಕೊಡುಗೆ, ಅನುಗ್ರಹಗಳನ್ನು ಎಣಿಸಲಾರಿರಿ.’ ಬನಿ ಇಸ್ರಾಯಿಲ್ ಅಧ್ಯಾಯದ ೭೦ನೆಯ ವಚನದಲ್ಲಿ ನೆಲದಲ್ಲೂ ಜಲದಲ್ಲೂ ನೀವು ಪ್ರಯಾಣಿಸುವರನ್ನಾಗಿ ಮಾಡಲಾಗಿದೆ. ಶುದ್ಧ ಆಹಾರ ಏರ್ಪಡಿಸಿ ನಿಮ್ಮನ್ನು ಇತರ ಸೃಷ್ಟಿಯ ಎದುರು ಶ್ರೇಷ್ಠತೆಯನ್ನು ದಯಪಾಲಿಸಲಾಗಿದೆ. ಇನ್ನೊಂದೆಡೆ `ನಿಮಗೆಲ್ಲ ಬಂದಿರುವುದು ಅಲ್ಲಾಹನ ಕಡೆಯಿಂದ..’
ಸಾವಿರಾರು ವರ್ಷಗಳ ನಂತರದ ಜೀವನ ಕ್ರಮದಲ್ಲಿ ಈ ಎಲ್ಲ ಕೊಡುಗೆ, ಕಾಣಿಕೆ, ಅನುಗ್ರಹಗಳು ನಾಗರಿಕ ಜೀವನದ ಪ್ರಮುಖ ಅಂಗಗಳಾಗಿದ್ದವು. ದೇವರ ಇಂತಹ ಔದಾರ್ಯದ ಕೊಡುಗೆಗಳಿಂದಲೇ ಔದ್ಯೋಗಿಕ ವೈಜ್ಞಾನಿಕ ಕ್ರಾಂತಿಗಳನ್ನು ಮಾಡಲು ಮಾನವನಿಗೆ ಸಾಧ್ಯವಾಯಿತು ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
ಕುರಾನಿನ ಬಕರ ಅಧ್ಯಾಯದ ೨೯ನೇ ವಚನದಲ್ಲಿ ಅಲ್ಲಾಹನು ಭೂಮಿಯನ್ನು ಇರುವುದೆಲ್ಲ ನಿಮಗಾಗಿ ಸೃಷ್ಟಿಸಲಾಗಿದೆ. ಆಕಾಶದ ಕಡೆಗೆ ನೋಡಿ. ಏಳು ಆಕಾಶಗಳನ್ನು ರೂಪಿಸಲಾಗಿದೆ ಎಂದು ಮಾನವನಿಗೆ ಎಚ್ಚರಿಸಿದ್ದಾನೆ. ಒಮ್ಮೆ ಕತ್ತೆತ್ತಿ ನೀಲಿ ವರ್ಣದ ಶುಭ್ರ ಆಕಾಶದತ್ತ ನೋಡಿದಾಗ ಆ ನೀಲಿ ಕೊಡೆಯ ಕೆಳಗೆ ಕಾಣಿಕೆ ಅನುಗ್ರಹಗಳ ಅರಿವಾಗಬೇಕು.
ಅವನ ಪ್ರತಿ ಕಾಣಿಕೆಯನ್ನು ಅನುಭವಿಸುವಾಗ ದೇವರನ್ನು ಕೃತಜ್ಞತಾ ಭಾವದಿಂದ ನೆನಪಿಸಬೇಕು. ಇದು ಅವನು ನೀಡಿದ ಪ್ರಸಾದವೆಂದು ಅರಿಯಬೇಕು…

Previous articleಆರೋಗ್ಯದ ರಾಮಬಾಣ-ಸೋಲಿಯಸ್ ಪುಷ್‌ಅಪ್..!
Next articleವಿದ್ಯುತ್​ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ