ನಿಮ್ಮ ಆಡಳಿತದಿಂದ ರಾಜ್ಯವನ್ನು ಮುಕ್ತಗೊಳಿಸದೇ ಕರುನಾಡಿಗೆ ಮುಕ್ತಿಯಿಲ್ಲ

0
21

ದೇಶದಲ್ಲೇ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ.1

ಬೆಂಗಳೂರು: ಜನಾಕ್ರೋಶದ ಬಿಸಿ ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಸುಟ್ಟು ಪಥನಗೊಳಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಭ್ರಷ್ಟಾಚಾರ, ಲೂಟಿಕೋರತನ ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಅವಿಭಾಜ್ಯ ಅಂಗ ಎಂಬುದನ್ನು ಸ್ವತಃ ನಿಮ್ಮ ಆರ್ಥಿಕ ಸಲಹೆಗಾರರೂ ಆಗಿರುವ ಶಾಸಕ ಬಸವರಾಜ ರಾಯರೆಡ್ಡಿ ಅವರೇ ಸ್ಪಷ್ಟವಾಗಿ ಬಹಿರಂಗಪಡಿಸಿದ್ದಾರೆ.
“ ದೇಶದಲ್ಲೇ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ.1 “ ಎಂದು ಹೇಳುವ ಮೂಲಕ ಈ ಸರ್ಕಾರದ ಕರಾಳ ಭ್ರಷ್ಟತೆಯ ಮುಖವಾಡವನ್ನು ಬಯಲು ಮಾಡಿ ರಾಜ್ಯದ ಘನತೆ ಕುಗ್ಗಿದ ಸ್ವರೂಪವನ್ನು ಬಿಚ್ಚಿಟ್ಟಿದ್ದಾರೆ ಆ ಮೂಲಕ ರಾಷ್ಟ್ರ ಮಟ್ಟದಲ್ಲಿ ರಾಜ್ಯ ನಿಮ್ಮ ಆಡಳಿತದಲ್ಲಿ ಸಂಪೂರ್ಣ ಭ್ರಷ್ಟತೆಯ ಕಪ್ಪುಮಸಿ ಮೆತ್ತಿಕೊಂಡಿರುವುದನ್ನು ಅನಾವರಣ ಮಾಡಿ ಕರ್ನಾಟಕ ವಿಶ್ವಮಟ್ಟದಲ್ಲಿ ತಲೆತಗ್ಗಿಸುವ ಪರಿಸ್ಥಿತಿ ಇರುವುದನ್ನು ವಿವರಿಸಿದ್ದಾರೆ.

“ಜನಪ್ರತಿನಿಧಿಗಳು ಹೇಗೆ ಇರುತ್ತಾರೊ ಅದರಂತೆಯೇ ಅಧಿಕಾರಿಗಳೂ ಇರುತ್ತಾರೆ, ಮುಖ್ಯಮಂತ್ರಿ ಏನೇ ಹೇಳಿದರೂ ಭ್ರಷ್ಟಾಚಾರದ ಕುರಿತು ನನ್ನ ವೈಯಕ್ತಿಕ ಅಭಿಪ್ರಾಯ ಇದೇ ಇರುತ್ತದೆ” ಎಂದು ಹೇಳುವ ಮೂಲಕ ‘ಯಥಾ ರಾಜ ತಥಾ ಮಂತ್ರಿಗಳು, ಅಧಿಕಾರಿಗಳು ‘ಎಂಬ ಮಾತು ನಿಮ್ಮ ಆಡಳಿತದಲ್ಲಿ ಅಕ್ಷರಶಃ ಅನ್ವಯಿಸುತ್ತಿದೆ ಎನ್ನುವುದನ್ನು ಹೇಳುವ ಮೂಲಕ ವಾಸ್ತವ ಸ್ಥಿತಿಯ ಮೇಲೆ ನೇರವಾಗಿ ಬೆಳಕು ಚೆಲ್ಲಿದ್ದಾರೆ.

ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವನ್ನು 40% ಸರ್ಕಾರ ಎಂಬ ಸುಳ್ಳು ಅಪಪ್ರಚಾರಗಳನ್ನು ನಡೆಸಿ ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸಿ ಜಗತ್ತಿನಲ್ಲಿ “ನಾವೇ ಸತ್ಯವಂತರು “ಎಂದು ಡಂಗುರ ಸಾರಿ ಅಧಿಕಾರಕ್ಕೆ ಬಂದ ನಿಮ್ಮ ನೈಜ ಮುಖವಾಡ ಇದೀಗ ಕಳಚಿ ಬಿದ್ದಿದೆ.

ಭ್ರಷ್ಟತೆಯ ಕೆನ್ನಾಲಿಗೆ ರಾಜ್ಯದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆ ಏರಿಸುವ ಮೂಲಕ ಜನಸಾಮಾನ್ಯರು ಹಾಗೂ ಕಡು ಬಡವರ ದೈನಂದಿನ ಬದುಕಿನ ಸ್ಥಿತಿಯನ್ನು ಸುಡುತ್ತಿದೆ. ಇದಕ್ಕಾಗಿ ನಿಮ್ಮ ಸರ್ಕಾರದ ವಿರುದ್ಧ ಜನಬೆಂಬಲಿತ ‘ಬಿಜೆಪಿ ಜನಾಕ್ರೋಶದ ಹೋರಾಟದ ಯಾತ್ರೆ’ರಾಜ್ಯಾದ್ಯಂತ ಯಶಸ್ವಿಯಾಗಿ ಮುನ್ನಡೆದಿದೆ. ನಿಮ್ಮ ಆಡಳಿತದಿಂದ ರಾಜ್ಯವನ್ನು ಮುಕ್ತಗೊಳಿಸದೇ ಕರುನಾಡಿಗೆ ಮುಕ್ತಿಯಿಲ್ಲ ಎಂಬ ನಿರ್ಧಾರಕ್ಕೆ ರಾಜ್ಯದ ಜನ ಬಂದಿದ್ದಾರೆ. ಸದ್ಯದಲ್ಲೇ ಜನಾಕ್ರೋಶದ ಬಿಸಿ ನಿಮ್ಮ ಸರ್ಕಾರವನ್ನು ಸುಟ್ಟು ಪಥನಗೊಳಿಸಲಿದೆ ಎಂದಿದ್ದಾರೆ.

Previous articleಏಪ್ರಿಲ್ 11ರಂದು ಮಂತ್ರಾಲಯದಲ್ಲಿ ರಾಧಾಕೃಷ್ಣರ ಕಲರವ
Next article26/11ರ ಮುಂಬೈ ಭಯೋತ್ಪಾದಕ ದಾಳಿ: ಉಗ್ರ ರಾಣಾ ಭಾರತಕ್ಕೆ!