ನಾಳೆ ಬಾ ಪದ್ಧತಿಗೆ ಮೊದಲು ವಿದಾಯ ಬೇಕು

0
10

ಮಳೆ ಬರಲಿ ಬಾರದಿರಲಿ, ಬೆಲೆಏರಿಕೆ ಆಗಲಿ ಬಿಡಲಿ ಸರ್ಕಾರಿ ನೌಕರರ ಸೇವೆ ಸುರಕ್ಷಿತ. ರೈತ ದೇಶದ ಬೆನ್ನೆಲುಬು. ಅವನು ಸರ್ಕಾರಿ ಕಚೇರಿಗೆ ಹೋದರೆ ಕ್ಯಾರೇ ಅನ್ನುವವರಿಲ್ಲ.

ಮುಖ್ಯಮಂತ್ರಿ ರಾಜ್ಯದ ಎಲ್ಲ ಡಿಸಿಗಳ ಸಭೆಯಲ್ಲಿ ಸರ್ಕಾರಿ ನೌಕರರು ಹೇಗೆ ನಡೆದುಕೊಳ್ಳಬೇಕೆಂಬುದನ್ನು ಪ್ರಸ್ತಾಪಿಸಿದ್ದಾರೆ. ಆದರೆ ಸರ್ಕಾರಿ ಇಲಾಖೆಗೆ ಎಲ್ಲೇ ಹೋಗಲಿ ನಾಳೆ ಬಾ’ ಎಂದು ಹೇಳುವುದನ್ನು ಕೈಬಿಟ್ಟಿಲ್ಲ . ಜನಸಾಮಾನ್ಯರು ಬಹಳ ಕಷ್ಟಪಟ್ಟು ತಮ್ಮ ಕೆಲಸಕ್ಕಾಗಿ ಸರ್ಕಾರಿ ಕಚೇರಿಗಳ ಮುಂದೆ ಗಂಟೆಗಟ್ಟಲೆ ಕಾಯುತ್ತ ಕುಳಿತಿರುತ್ತಾರೆ. ಆದರೆ ಅಲ್ಲಿಯ ಸಿಬ್ಬಂದಿ ನಾಳೆ ಬಾ ಎನ್ನುವುದೇ ಹೆಚ್ಚು. ಬಹುತೇಕ ಜನತಬರ’ನ ರೀತಿ ಚಪ್ಪಲಿ ಸವೆಸಿದವರು. ಸಣ್ಣಪುಟ್ಟ ಕೆಲಸಕ್ಕೆ ಯಾವ ಶಾಸಕರು, ಸಚಿವರ ಪ್ರಭಾವವೂ ಬೇಕಿರುವುದಿಲ್ಲ. ಅಲ್ಲದೆ ಹಣವೂ ನೀಡಬೇಕಿಲ್ಲ. ನಮ್ಮ ಸರ್ಕಾರಿ ನೌಕರರು ಅಂದಿನ ಕೆಲಸವನ್ನೇ ಅವತ್ತೇ ಪೂರ್ಣಗೊಳಿಸಿದರೆ ಅದಕ್ಕಿಂತ ದೊಡ್ಡ ಸಮಾಜ ಸೇವೆ ಮತ್ತೊಂದಿಲ್ಲ. ಹಿಂದೆ ವಿಜಯಪುರದಲ್ಲಿ ಜಿಲ್ಲಾಧಿಕಾರಿಯಾಗಿ ಇರ್ನಿರಾಯ ಇದ್ದರು. ಬಡಮಹಿಳೆಯ ಕೆಲಸ ಮಾಡಿಕೊಡಲಿಲ್ಲ ಎಂದು ಗುಮಾಸ್ತರ ಮೇಲೆ ಕೈಮಾಡಿದ್ದರು. ಕೂಡಲೇ ಸರ್ಕಾರಿ ನೌಕರರು ಮುಷ್ಕರ ನಡೆಸಿದರು. ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಪರ ನಿಂತರು. ಕೊನೆಗೆ ಮಹಿಳೆಯನ್ನು ಕರೆದು ಅಂದೇ ಕಡತ ವಿಲೇವಾರಿ ಮಾಡಬೇಕಾಗಿ ಬಂದಿತು. ಈಗ ಅಂಥ ಸಾಮಾಜಿಕ ಕಳಕಳಿ ಇರುವ ಅಧಿಕಾರಿಗಳು ವಿರಳ. ಈಗ ಯಾವುದೇ ಕಚೇರಿಗೆ ಹೋಗಿ ನಿಮಗೆ ಸರಿಯಾದ ಉತ್ತರವೇ ಸಿಗುವುದಿಲ್ಲ. ಪ್ರತಿ ಕಚೇರಿಯಲ್ಲೂ ಜನರಿಗೆ ತಪ್ಪು ದಾರಿ ತೋರುವವರೇ ಹೆಚ್ಚು. ಕೆಲವರು ಮಾತ್ರ ನಿಷ್ಠೆಯಿಂದ ಕೆಲಸ ಮಾಡುತ್ತಾರೆ. ಅವರನ್ನು ಕಂಡರೆ ಬೇರೆಯವರಿಗೆ ಆಗುವುದೇ ಇಲ್ಲ. ಪ್ರತಿಯೊಬ್ಬರಿಗೂ ಕಚೇರಿಗೆ ಬರುವಾಗ ಹಾಜರಾತಿ ಯಂತ್ರದಲ್ಲಿ ಬೆರಳು ಒತ್ತಬೇಕು. ಕಚೇರಿಯಿಂದ ಹೋಗುವಾಗ ಮತ್ತೆ ಬೆರಳು ಒತ್ತಬೇಕು. ಮಧ್ಯೆ ಎಷ್ಟು ಬಾರಿ ಬೇಕಾದರೂ ಹೋಗಿ ಬರಬಹುದು. ಅವರು ತಮ್ಮ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವದೇ ಅಪರೂಪ. ಪ್ರತಿಯೊಬ್ಬರಿಗೂ ಪ್ರತಿದಿನ ಇಷ್ಟು ಕೆಲಸ ಮಾಡಲೇಬೇಕು ಎಂಬ ನಿಯಮವೇನೂ ಇಲ್ಲ. ಉತ್ತರದಾಯಿತ್ವ ಎಂಬುದು ಇಲ್ಲವೇ ಇಲ್ಲ ಇಂದಿನ ಕೆಲಸವನ್ನು ಒಂದು ವರ್ಷ ಬಿಟ್ಟು ಮಾಡಿದರೂ ಯಾರೂ ಕೇಳುವುದೇ ಇಲ್ಲ. ಇದರಿಂದ ಸಾವಿರಾರು ಬಡ ಜೀವಗಳು ನೊಂದು ಹೋಗಿವೆ. ರಾಜ್ಯ ಹೈಕೋರ್ಟ್‌ಗೆ ಸರ್ಕಾರಿ ಇಲಾಖೆಯ ನಿಧಾನ ದ್ರೋಹದ ಬಿಸಿ ಒಮ್ಮೆ ತಟ್ಟಿತು. ಕಳಪೆ ಔಷಧ ವಿತರಣೆ ಪ್ರಕರಣ ದಾಖಲಾಗಿ ೩ ವರ್ಷ ೮ ತಿಂಗಳಾದ ಮೇಲೆ ನ್ಯಾಯಾಲಯಕ್ಕೆ ಬಂದಿತು. ಆ ಪ್ರಕರಣದಲ್ಲಿ ಶಿಕ್ಷೆ ಇರುವುದೇ ೨ ವರ್ಷ. ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿ ಪ್ರಕರಣವನ್ನು ಕೈಬಿಟ್ಟರು. ಅಧಿಕಾರಿಯೊಬ್ಬರು ಲೋಕಾಯುಕ್ತಕ್ಕೆ ಸಿಕ್ಕಿಬಿದ್ದರು. ಅವರು ಸ್ವಯಂ ನಿವೃತ್ತಿ ಪಡೆದು ಶಾಸಕರಾಗಿ ಸಚಿವರಾದರು. ಅವರ ಮೇಲಿನ ಪ್ರಕರಣ ನ್ಯಾಯಾಲಯಕ್ಕೆ ಬರಲೇ ಇಲ್ಲ. ಸರ್ಕಾರ ಅನುಮತಿ ಕೊಡಲೇ ಇಲ್ಲ.
ಇಂಥ ವ್ಯವಸ್ಥೆಯಲ್ಲಿ ಕಂಪ್ಯೂಟರೀಕರಣ, ಇ- ಆಡಳಿತ, ಇಂಟರ್‌ನೆಟ್ ಜಾಲ, ಡಿಜಿಟಲ್ ತಂತ್ರಜ್ಞಾನ ಉಪಯೋಗಕ್ಕೆ ಬರುವುದೇ ಇಲ್ಲ. ಯುವ ಪೀಳಿಗೆ ಬಂದ ಮೇಲೆ ಆಡಳಿತದಲ್ಲಿ ಬದಲಾವಣೆ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಅದರೊಂದಿಗೆ ಮಹಿಳೆಯರ ಸಂಖ್ಯೆ ಅಧಿಕಗೊಂಡಲ್ಲಿ ಕ್ರಾಂತಿಯಾಗಬಹುದು ಎಂದು ಹೇಳಲಾಗಿತ್ತು. ಏನೂ ಆಗಲಿಲ್ಲ. ಈಗ ಮನೆಯಿಂದಲೇ ಕೆಲಸ, ಮೊಬೈಲ್ ಬಳಕೆಯಾವುದೂ ಉಪಯೋಗಕ್ಕೆ ಬರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ರಾಜಕೀಯ ಹಸ್ತಕ್ಷೇಪ ಆಡಳಿತ ವ್ಯವಸ್ಥೆಯನ್ನು ಹದಗೆಡಿಸಿದೆ. ಪಾಲಿಕೆ ಸದಸ್ಯರಿಂದ ಹಿಡಿದು ಮುಖ್ಯಮಂತ್ರಿಯವರೆಗೆ ಎಲ್ಲರೂ ತಮ್ಮ ಮಾತೇ ನಡೆಯಬೇಕೆಂದು ಬಯಸುತ್ತಾರೆಯೇ ಹೊರತು ಜನಸಾಮಾನ್ಯರಿಗೆ ಗೌರವ ಕೊಡಿ ಎಂದೂ ಹೇಳುವುದಿಲ್ಲ. ಮುಖ್ಯಮಂತ್ರಿ ಜನತಾದರ್ಶನದಲ್ಲಿ ಜನಸಾಮಾನ್ಯರು ಹೆಚ್ಚಿನ ಸಂಖ್ಯೆ ದೂರು ಕೊಡುತ್ತಿದ್ದಾರೆ ಎಂದರೆ ಸರ್ಕಾರಿ ಯಂತ್ರ ಕುಸಿದಿದೆ ಎಂದೇ ಅರ್ಥ. ಆದರೆ ನಮ್ಮ ಮುಖ್ಯಮಂತ್ರಿಗಳು ಜನತಾದರ್ಶನವನ್ನು ಪ್ರತಿಷ್ಠೆಯಾಗಿ ಪರಿಗಣಿಸುತ್ತಾರೆ. ಹಿಂದೆ ಇದ್ದ ಕೆಲವು ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯವನ್ನೇ ದೊಡ್ಡ ಕಾರ್ಯಕ್ರಮ ಮಾಡಿಕೊಂಡಿದ್ದರು.

Previous articleಕುಂಚತಂತ್ರ
Next articleನಮ್ಮೂರ ಮಹಾತ್ಮೆ