ಬಾಗಲಕೋಟೆ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿರುವ ಉಗ್ರರ ದಾಳಿ ವೇಳೆ ಮುಸ್ಲಿಂ ವ್ಯಕ್ತಿಯೂ ಮೃತಪಟ್ಟಿದ್ದು, ಧರ್ಮ ಕೇಳಿ ಉಗ್ರರು ಹತ್ಯೆ ಮಾಡಿರುವ ಬಗ್ಗೆ ಖಚಿತತೆ ಇಲ್ಲ. ಇಂಥ ಘಟನೆಗಳಿಗೂ ಧರ್ಮವನ್ನು ತಳಕು ಹಾಕಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಗ್ರರು ದಾಳಿ ಮಾಡಿದ ಸಂದರ್ಭದಲ್ಲಿ ಜನ ಆತಂಕದಲ್ಲಿರುತ್ತಾರೆ. ಆ ಸಂದರ್ಭದಲ್ಲಿ ಧರ್ಮ ಕೇಳಿ ದಾಳಿ ಮಾಡುತ್ತಾರೆಂದು ನನಗೇನೂ ಅನಿಸುವುದಿಲ್ಲ. ಧರ್ಮವನ್ನು ತಳಕು ಹಾಕಿ ರಾಜಕಾರಣ ಮಾಡೋದು ಸರಿಯಲ್ಲ ಎಂದು ನುಡಿದರು.
ಆ ಘಟನೆಯ ಸಂತ್ರಸ್ತರೇ ಉಗ್ರರು ಧರ್ಮ ಕೇಳಿರುವುದನ್ನು ಖಚಿತ ಪಡಿಸಿದ್ದಾರೆ ಎಂದು ಮಾಧ್ಯಮಗಳು ಸಚಿವರ ಗಮನಕ್ಕೆ ತಂದಾಗಲೂ ಅದೇ ವರಸೆಯಲ್ಲೇ ಉತ್ತರ ಮುಂದವರಿಸಿದರು.
ಸಿಂಧೂ ನದಿಯಿಂದ ಪಾಕಿಸ್ತಾನಕ್ಕೆ ನೀರು ಹರಿಸುವುದನ್ನು ನಿಲ್ಲಿಸಿರುವ ಕೇಂದ್ರ ಸರ್ಕಾರದ ಕ್ರಮದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಇಂಥ ವಿಚಾರಗಳಲ್ಲಿ ಏಕಾಏಕಿ ನಿರ್ಧಾರ ಕೈಗೊಳ್ಳಲಾಗುವುದಿಲ್ಲ. ಅಲ್ಲಿಯೂ ಹಿಂದೂಗಳಾಗಲಿ, ಇಲ್ಲಿಯವರು ಇರುತ್ತಾರೆ. ಹೀಗಿರುವಾಗ ಅಳೆದುತೂಗಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದರು.