ನಾವು ಸೇವಿಸುವ ಹಲವಾರು ವಿಧದ ಆಹಾರಗಳು ನಮ್ಮ ದೇಹಕ್ಕೆ ಪೌಷ್ಟಿಕಾಂಶಗಳನ್ನು ಮತ್ತು ಶಕ್ತಿಯನ್ನು ಕೊಡುತ್ತವೆ. ಜೀರ್ಣವಾದ ಬಳಿಕ ಉಳಿಕೆ ಆಹಾರ ತ್ಯಾಜ್ಯದ ರೂಪದಲ್ಲಿ ದೇಹದಿಂದ ಬಿಡುಗಡೆಯಾಗುತ್ತದೆ. ತ್ಯಾಜ್ಯ ಎಂದರೆ ಬೇಡದ ವಸ್ತು. ಇದು ಕೇವಲ ಮಲಮೂತ್ರದ ರೂಪದಲ್ಲಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇನ್ನು ಬೇರೆ ಬೇರೆ ಸ್ವರೂಪಗಳಲ್ಲಿ ನಮ್ಮ ದೇಹದಲ್ಲಿ ಶೇಖರಣೆಯಾಗಿ ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಇದಕ್ಕೆ ಉದಾಹರಣೆಯೆಂದರೆ ಯೂರಿಕ್ ಆಮ್ಲ. ಕೆಲವು ಕಾರಣಗಳಿಂದ ಇದು ಸಂಪೂರ್ಣವಾಗಿ ನಮ್ಮ ದೇಹದಿಂದ ಮೂತ್ರ ವಿಸರ್ಜನೆಯಲ್ಲಿ ಹೊರಹೋಗುವುದಿಲ್ಲ. ಇದು ಹೆಚ್ಚಾಗಿ ನಮ್ಮ ದೇಹದಲ್ಲಿ ಶೇಖರಣೆ ಆದಾಗ ತೊಂದರೆ ಉಂಟಾಗುತ್ತದೆ.
ಯೂರಿಕ್ ಆಮ್ಲವು ರಕ್ತದಲ್ಲಿ ಕಂಡುಬರುವ ರಾಸಾಯನಿಕ ಉತ್ಪನ್ನವಾಗಿದ್ದು ದೇಹವು ಪ್ಯೂರಿನ್ ಎಂಬ ಪದಾರ್ಥದ ವಿಭಜನೆಯಿಂದ ಉತ್ಪತ್ತಿಯಾಗುತ್ತದೆ. ಯೂರಿಕ್ ಆಮ್ಲವು ರಕ್ತದಲ್ಲಿ ಕರಗಿ ಮೂತ್ರಪಿಂಡಗಳ ಮೂಲಕ ಹಾದುಹೋಗುತ್ತ ಮೂತ್ರದೊಂದಿಗೆ ಮಿಶ್ರಣಗೊಂಡು ದೇಹದಿಂದ ಹೊರಹೋಗುತ್ತದೆ. ತೀವ್ರ ರಕ್ತದೊತ್ತಡ, ಮಧುಮೇಹ, ಮೆಟಾಬಾಲಿಕ್ ಸಿಂಡ್ರೋಮ್, ಡಯರೆಟಿಕ್ಸ್, ಅತಿಯಾದ ಆಲ್ಕೊಹಾಲ್ ಸೇವನೆ, ಕೆಲವು ಇಮ್ಯುನೊಸಪ್ರೆಸಿವ್ ಔಷಧಿಗಳು, ಕೆಲವು ರೀತಿಯ ಆಹಾರಗಳಲ್ಲಿನ ಅಂಶಗಳು, ಪ್ಯೂರಿನ್‌ಗಳನ್ನು ಒಳಗೊಂಡಿರುವ ಆಹಾರ-ಪಾನೀಯ-ಕೆಂಪು ಮಾಂಸ, ಕೆಲವು ಸಮುದ್ರಾಹಾರಗಳು ದೇಹದಲ್ಲಿ ಪ್ಯೂರಿನ್ ಮಟ್ಟವನ್ನು ಹೆಚ್ಚಿಸಿ ಯೂರಿಕ್ ಆಮ್ಲದ ಹೆಚ್ಚುವಿಕೆಗೆ ಕಾರಣವಾಗಬಹುದು. ಹೆಚ್ಚಾಗುವ ಯೂರಿಕ್ ಆಮ್ಲದ ಶೇಖರಣೆ ದೇಹದ ರಕ್ತದಲ್ಲಿ ಕಂಡುಬರುವ ತ್ಯಾಜ್ಯ ಉತ್ಪನ್ನವಾಗಿದೆ. ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಳವಾದಲ್ಲಿ ಕೀಲುಗಳ ಮೇಲೆ ಪರಿಣಾಮ ಬೀರುವ ಗೌಟ್ಸ್‌ನಿಂದ ಊತ, ನೋವು ಕಂಡುಬರುತ್ತವೆ. ರಕ್ತದಿಂದ ತ್ಯಾಜ್ಯ ಉತ್ಪನ್ನಗಳನ್ನು ಫಿಲ್ಟರ್ ಮಾಡುವ ಮೂತ್ರಪಿಂಡಗಳನ್ನು ಆವರಿಸುವ ಕಾಯಿಲೆಗಳು, ಕಿಡ್ನಿಸ್ಟೋನ್ ದೇಹದ ತ್ಯಾಜ್ಯಗಳ ಅಸಮರ್ಪಕ ನಿರ್ಮೂಲನೆಗೆ ಕಾರಣವಾಗುತ್ತದೆ.
ಕ್ಯಾನ್ಸರ್ ಕಾಯಿಲೆಗೆ ಒಳಗಾದವರು ಕಿಮೋಥೆರಪಿ ಚಿಕಿತ್ಸೆಯ ಭಾಗವಾದ ಕ್ಯಾನ್ಸರ್ ಮತ್ತು ಆರೋಗ್ಯಕರ ಜೀವಕೋಶಗಳನ್ನು ಕೊಲ್ಲುವ ಪ್ರಕ್ರಿಯೆಯಲ್ಲಿ ಪ್ಯೂರಿನ್‌ಗಳು ಬಿಡುಗಡೆಗೊಳ್ಳುತ್ತವೆ. ಇದು ಯೂರಿಕ್ ಆಸಿಡ್ ಹೆಚ್ಚಳದ ಲಕ್ಷಣಗಳಿಗೆ ಕಾರಣವಾಗಬಹುದು. ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವವರಲ್ಲಿ ಕೆಲವು ಅವಧಿಯ ನಂತರ ಅಥವಾ ಯೂರಿಕ್ ಆಮ್ಲದ ಸಾಮಾನ್ಯ ಮಟ್ಟ ಮೀರಿದ ನಂತರ ರೋಗ ಲಕ್ಷಣಗಳು ಕಂಡುಬರಬಹುದು. ಬೆನ್ನಿನ ಎರಡೂ ಬದಿಯಲ್ಲಿ ನೋವು, ಆಗಿಂದಾಗ್ಗೆ ಮೂತ್ರವಿಸರ್ಜನೆ ಜೊತೆಗೆ ಮೂತ್ರವು ಗಾಢ ಮತ್ತು ಮಂದವಾಗಿ ವಿಪರೀತ ವಾಸನೆಯನ್ನು ಹೊಂದಿರುತ್ತದೆ. ವಾಕರಿಕೆ ಅಥವಾ ವಾಂತಿಯಾಗುವುದು ಯೂರಿಕ್ ಆಮ್ಲ ಹೆಚ್ಚಾಗಿರುವ ಲಕ್ಷಣಗಳೆನ್ನಬಹುದು.
ಮನೆಯಲ್ಲಿಯೇ ಆಹಾರ ಬಳಕೆಯನ್ನು ನಿಯಂತ್ರಿಸುವ ಮೂಲಕ ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ನಿಗದಿತಮಟ್ಟದಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗಬಲ್ಲದು. ಯೂರಿಕ್ ಆಸಿಡ್ ತೊಂದರೆಯಲ್ಲಿರುವವರು ಮೊದಲಿಗೆ ಮದ್ಯಸೇವನೆಯನ್ನು ಅದರಲ್ಲೂ ಬಿಯರ್ ಬಳಕೆಯನ್ನು ನಿಲ್ಲಿಸಬೇಕು. ಕೆಂಪು ಮಾಂಸಗಳಾದ ಹಂದಿ, ಕುರಿ ಮಾಂಸ ಮತ್ತು ಚಿಪ್ಪು ಮೀನುಗಳಂತ ಕೆಲವು ವಿಧದ ಸಮುದ್ರಾಹಾರಗಳು, ಹೂಕೋಸು, ಅಣಬೆ, ಬಟಾಣಿ, ಬೇಳೆಕಾಳುಗಳ ಸೇವನೆಯನ್ನು ಕಡಿಮೆ ಮಾಡಬೇಕು. ಇದು ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸಲು ನಿಮಗೆ ತುಂಬಾ ಸಹಾಯ ಮಾಡುತ್ತದೆ. ಸಕ್ಕರೆ, ಸಿಹಿ ಹಣ್ಣುಗಳು, ಜೇನುತುಪ್ಪ ಇವುಗಳ ಸೇವನೆ ಕೂಡ ನಿಮ್ಮ ದೇಹಕ್ಕೆ ಪ್ಯೂರಿನ್ ಸಿಕ್ಕಂತೆ ಆಗುತ್ತದೆ ಮತ್ತು ಅದರಿಂದ ಯೂರಿಕ್ ಆಮ್ಲ ಹೆಚ್ಚು ಉತ್ಪತ್ತಿಯಾಗುತ್ತದೆ.
ಒಮೆಗಾ-೩, ಫೈಬರ್ ಮತ್ತು ಪೊಟ್ಯಾಷಿಯಮ್, ಮೆಗ್ನೀಷಿಯಮ್ ಇರುವಂತಹ ವಾಲ್ನಟ್, ಬಾದಾಮಿ, ಗೋಡಂಬಿ, ಪಿಸ್ತಾ ಬೀಜಗಳನ್ನು ಸಾಧ್ಯವಾದಷ್ಟು ನೀವು ಸೇವನೆ ಮಾಡುವ ಆಹಾರಗಳಲ್ಲಿ ಬಳಸಿ. ವಾಕಿಂಗ್, ಸೈಕ್ಲಿಂಗ್ ಮತ್ತು ಈಜು ಮುಂತಾದ ನಿಯಮಿತ ಮಧ್ಯಮ ವ್ಯಾಯಾಮಗಳನ್ನು ಮಾಡುತ್ತ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ದೇಹದಲ್ಲಿ ಯೂರಿಕ್ ಆಸಿಡ್ ಸಾಂದ್ರತೆ ಮಟ್ಟವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ನಾರಿನಂಶವಿರುವ ಮಸೂರ ಬೀಜಗಳು, ಓಟ್ಸ್, ಕ್ವಿನೋವಾ, ಬ್ರೌನ್ ರೈಸ್, ವಿಟಮಿನ್ ಸಿ ಆಹಾರಗಳಾದ ಕಿತ್ತಳೆ, ದ್ರಾಕ್ಷಿಹಣ್ಣು, ಕಿವಿ ಹಣ್ಣುಗಳನ್ನು ಸೇವಿಸಬಹುದು. ಆಂಟಿ ಆಕ್ಸಿಡೆಂಟ್ ಹೊಂದಿರುವ ತರಕಾರಿಗಳಾದ ಕ್ಯಾರೆಟ್, ಸೌತೆಕಾಯಿ, ಟೊಮೇಟೊ, ಬ್ರೋಕಾಲಿಗಳನ್ನು ಹೆಚ್ಚಾಗಿ ಬಳಸಿದಲ್ಲಿ ಉತ್ತಮ.
ದೇಹದಲ್ಲಿ ಯೂರಿಕ್ ಆಸಿಡ್ ನಿಯಂತ್ರಣಕ್ಕೆ ಹೀಗೆ ಮಾಡಿ…
ದೇಹದಲ್ಲಿ ಯೂರಿಕ್ ಆಸಿಡ್‌ನ್ನು ಕಡಿಮೆ ಮಾಡಲು ದಿನನಿತ್ಯ ೮ರಿಂದ ೧೦ ಗ್ಲಾಸ್‌ನಷ್ಟು ನೀರನ್ನು ಕುಡಿಯಬೇಕು. ಪ್ರತಿದಿನ ಒಂದು ಚಮಚ ಸಾವಯವ ಆಪಲ್ ಸೈಡರ್ ವಿನಿಗರ್ ಜೊತೆಗೆ ಒಂದು ಲೋಟ ನೀರು ಕುಡಿಯಿರಿ. ಆಪಲ್ ಸೈಡರ್ ವಿನಿಗರ್ ದೇಹವನ್ನು ನೈಸರ್ಗಿಕವಾಗಿ ಶುದ್ಧೀಕರಿಸುತ್ತದೆ ಮತ್ತು ನಿರ್ವಿಷಗೊಳಿಸುತ್ತದೆ. ದಿನಂಪ್ರತಿ ಕಾಫಿ, ಗ್ರೀನ್ ಟೀ, ಮೊಸರು ಸೇವನೆ ಒಳ್ಳೆಯದು. ಚರ‍್ರಿ ಹಣ್ಣು, ಸ್ಟಾಬೆರಿ, ರಸಬರ‍್ರಿ, ಬ್ಲೂ ಬರ‍್ರಿ, ನಿಂಬೆ ಹಣ್ಣುಗಳ ಸಕ್ಕರೆ ರಹಿತ ಜ್ಯೂಸು, ಪುದೀನಾ ಮತ್ತು ಬೆಳ್ಳುಳ್ಳಿ ಚಟ್ನಿಗಳ ಬಳಕೆ ಯೂರಿಕ್ ಆಸಿಡ್ ಅನ್ನು ಬಹಳ ಸುಲಭವಾಗಿ ನಿಯಂತ್ರಿಸುತ್ತದೆ.