ದೇವದುರ್ಗ ಶಾಸಕಿ ಪುತ್ರನಿಂದಲೇ ಟೋಲ್‌ಗೇಟ್ ಧ್ವಂಸ

ರಾಯಚೂರು: ಜಿಲ್ಲೆಯ ದೇವದುರ್ಗ-ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಕಾಕರಗಲ್ ಗ್ರಾಮದ ಸಮೀಪ ನಿರ್ಮಾಣ ಮಾಡಿದ್ದ ಟೋಲ್‌ಗೇಟ್‌ನಿಂದ ಸಾರ್ವಜನಿಕರಿಗೆ ಹಣ ವಸೂಲಿ ಮಾಡುತ್ತಿರುವ ಕ್ರಮವನ್ನು ಖಂಡಿಸಿ ದೇವದುರ್ಗ ಶಾಸಕರಾದ ಕರಿಯಮ್ಮ ನಾಯಕ ಅವರ ಪುತ್ರ ಸಂತೋಷ ನಾಯಕ ಅವರ ನೇತೃತ್ವದ ತಂಡವು ಬುಧವಾರ ರಾತ್ರಿ ಟೋಲ್‌ಗೇಟ್ ಧ್ವಂಸಗೊಳಿಸಿದ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ದೇವದುರ್ಗ ಶಾಸಕರಾದ ಕರಿಯಮ್ಮ ನಾಯಕ ಅವರ ಪುತ್ರ ಸಂತೋಷ ನಾಯಕ ಅವರೊಂದಿಗೆ ಸುಮಾರು 45 ರಿಂದ 50 ಜನರ ಗುಂಪುಕಟ್ಟಿಕೊಂಡು ಟೋಲ್‌ಗೇಟ್‌ಗೆ ನುಗ್ಗಿ ಪರಿಕರಗಳನ್ನು ಧ್ವಂಸ ಮಾಡಿ 19 ಲಕ್ಷ ರು. ನಷ್ಟ್ಟವನ್ನುಂಟು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಟೋಲ್‌ಗೇಟ್ ಸಂಬಂಧಿಸಿದಂತೆ ಗೇಟ್ ನರ್ವಹಣಾಧಿಕಾರಿ ನವೀನ ಕುಮಾರ ಅವರು ನೀಡಿದ ದೂರಿನ ಮೇರೆಗೆ ಗಬ್ಬೂರು ಠಾಣೆಯಲ್ಲಿ ಶಾಸಕಿ ಪುತ್ರ ಸಂತೋಷ ಜಿ. ನಾಯಕ, ಮುಖಂಡರಾದ ತಿಮ್ಮಾರೆಡ್ಡಿ, ಸಲೀಂ, ರಾಮಣ್ಣ ಮದರಕಲ್, ರಾಜಣ್ಣ ನಾಯಕ, ಭೀಮಣ್ಣ ಸೇರದಂತೆ ಇನ್ನಿತರರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಸ್ಥಳಕ್ಕೆ ಲಿಂಗಸುಗೂರು ಡಿವೈಎಸ್ಪಿ ದತ್ತಾತ್ರೇಯ ಕಾರ್ನಡ್, ಸಿಪಿಐ ಗುಂಡುರಾವ್ ಸೇರಿದಂತೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ಘಟನಾ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
ಟೋಲ್‌ಗೇಟ್ ನಿರ್ಮಾಣ ಮಾಡಿ ಸ್ಥಳೀಯರಿಂದ ಹಣ ವಸೂಲಿ ಮಾಡುವ ವಿಚಾರವಾಗಿ ಶಾಸಕಿ ಕರೆಮ್ಮ ಜಿ.ನಾಯಕ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ.