ಧಾರವಾಡ: ಅಯೋಧ್ಯೆ ರಾಮಮಂದಿರದ ಮೇಲೆ ಹಸಿರು ಧ್ವಜ ಹಾರಿಸಿದ ಫೋಟೋ ವೈರಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಮನೆ ಮೇಲೆ ಕಲ್ಲು ತೋರಾಟ ನಡೆಸಿದ ಘಟನೆ ತಾಲೂಕಿನ ತಡಕೋಡ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಗ್ರಾಮದ ಸದ್ದಾಂ ಹುಸೇನ್ ಎಂಬ ಯುವಕ ಕಳೆದ ದಿ. ೨೧ರಂದು ರಾಮಮಂದಿರದ ಮೇಲೆ ಹಸಿರು ಧ್ವಜ ಹಾರಿಸಿದ್ದಲ್ಲದೇ ಇಸ್ಲಾಮಿಕ್ ಪವರ್ ಇದು ಎಂದು ಬರೆದಿರುವ ಫೋಟೋವನ್ನು ತನ್ನ ವಾಟ್ಸ್ಅಪ್ ಸ್ಟೇಟಸ್‌ಗೆ ಇರಿಸಿಕೊಂಡಿದ್ದ. ವಿಷಯ ತಿಳಿದ ಪೊಲೀಸರು ತಕ್ಷಣ ಈತನನ್ನು ಬಂಧಿಸಿದ್ದರು.
ಆದರೆ, ಹಿಂದೂ ಸಂಘಟನೆಗಳ ಕಾರ್ಯಕರ್ತರು ಬುಧವಾರ ತಡರಾತ್ರಿ ಆರೋಪಿ ಸದ್ದಾಂ ಮನೆ ಮುಂದೆ ತೆರಳಿ ಮನೆಯ ಮೇಲೆ ಕಲ್ಲು ತೋರಾಟ ಮಾಡಿದ್ದಲ್ಲದೇ, ಗ್ರಾಮದಲ್ಲಿಯ ಈದ್ಗಾ ಮೈದಾನಕ್ಕೆ ಹೋಗಿ ಅಲ್ಲಿದ್ದ ಐದು ಗುಂಬಜ್‌ಗಳಲ್ಲಿ ಒಂದು ಗುಂಬಜ್‌ನ್ನು ಧ್ವಂಸಗೊಳಿಸಿದ್ದರು.
ವಿಷಯ ತಿಳಿದ ಗರಗ ಠಾಣೆ ಪೊಲೀಸರು ಮತ್ತು ಎಸ್‌ಪಿ ಗೋಪಾಲ ಬ್ಯಾಕೋಡ ತಂಡ ಗ್ರಾಮಕ್ಕೆ ತೆರಳಿ ಎರಡೂ ಸಮಾಜದ ಮುಖಂಡರನ್ನು ಕರೆಯಿಸಿ ಸಭೆ ಮಾಡಿದ್ದಾರೆ. ಗ್ರಾಮದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವಂತೆ ಮನವಿ ಮಾಡಿ ಒಡೆದ ಗುಂಬಜ್ ಮರು ನಿರ್ಮಾಣ ಮಾಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ೮ ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಗ್ರಾಮದಲ್ಲಿ ಶಾಂತಿ ನೆಲೆಸಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ತನಿಖೆ ಕೈಗೊಂಡಿದ್ದು, ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಸ್‌ಪಿ ಗೋಪಾಲ ಬ್ಯಾಕೋಡ ತಿಳಿಸಿದರು. ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.