ಜನ ಮೆಚ್ಚಿದ್ದರೆ ಈ ಸಮೀಕ್ಷೆ ನಡೆಸುವ ಅಗತ್ಯ ಏನಿದೆ?

0
30

ಬೆಂಗಳೂರು: ನಿಮ್ಮ ಗ್ಯಾರೆಂಟಿ ಯೋಜನೆಗಳು ನಿಜವಾಗಿಯೂ ಜನರಿಗೆ ತಲುಪಿದ್ದರೆ, ಅದನ್ನು ಜನ ಮೆಚ್ಚಿದ್ದರೆ ಈ ಸಮೀಕ್ಷೆ ನಡೆಸುವ ಅಗತ್ಯ ಏನಿದೆ? ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು, ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರು, ನೇಕಾರರು, ಮೀನುಗಾರರ ಸಮಸ್ಯೆ ಬಗ್ಗೆ ಸಮೀಕ್ಷೆ ನಡೆಸಲಿಲ್ಲ. ಹೊಟ್ಟೆಪಾಡಿಗಾಗಿ ಗುಳೆ ಹೋಗಿರುವ ಲಕ್ಷಾಂತರ ಕೃಷಿ ಕಾರ್ಮಿಕರ ಬಗ್ಗೆ ಸಮೀಕ್ಷೆ ನಡೆಸಲಿಲ್ಲ.
ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಮೀಕ್ಷೆ ನಡೆಸಲಿಲ್ಲ. ಆದರೆ ನೂರಾರು ಕೋಟಿ ಖರ್ಚು ಮಾಡಿ ಒಂದಲ್ಲ ಹತ್ತಾರು ಮೂಲಗಳಿಂದ ಗ್ಯಾರೆಂಟಿಗಳ ಬಗ್ಗೆ ಸಮೀಕ್ಷೆ ಮಾಡಿಸಲು ಸಿಎಂ ಸಿದ್ದರಾಮಯ್ಯನವರಿಗೆ ಎಲ್ಲಿಲ್ಲದ ಆಸಕ್ತಿ, ಆತುರ.

ಕಳೆದ 9 ತಿಂಗಳಿಂದ ರಾಜ್ಯವನ್ನು ಅಭಿವೃದ್ಧಿ ಶೂನ್ಯ ಮಾಡಿರುವ ಕರ್ನಾಟಕ ಕಾಂಗ್ರೆಸ್‌ ಸರ್ಕಾರ, ಲೋಕಸಭಾ ಚುನಾವಣೆಯಲ್ಲಿ ಜನರಿಗೆ ಮುಖ ತೋರಿಸಲು ಹೇಗಾದರೂ ಮಾಡಿ ಗ್ಯಾರೆಂಟಿ ಯೋಜನೆಗಳ ಬಗ್ಗೆ ಸರ್ಟಿಫಿಕೇಟ್ ಪಡೆಯಬೇಕೆಂದು ಹಠಕ್ಕೆ ಬಿದ್ದಿದೆ. ಸಿಎಂ
ಸಿದ್ದರಾಮಯ್ಯನವರೇ, ನಿಮ್ಮ ಗ್ಯಾರೆಂಟಿ ಯೋಜನೆಗಳು ನಿಜವಾಗಿಯೂ ಜನರಿಗೆ ತಲುಪಿದ್ದರೆ, ಅದನ್ನು ಜನ ಮೆಚ್ಚಿದ್ದರೆ ಈ ಸಮೀಕ್ಷೆ ನಡೆಸುವ ಅಗತ್ಯ ಏನಿದೆ?

ಯಾವುದೇ ಯೋಜನೆ ಜನರ ಬದುಕಿನ ಮೇಲೆ ಬೀರಿರುವ ಪರಿಣಾಮ, ಯೋಜನೆಯ ಪೂರ್ವದಲ್ಲಿ, ಯೋಜನೆಯ ನಂತರದಲ್ಲಿ ಅದು ಜನರ ಬದುಕಿನಲ್ಲಿ ತಂದಿರುವ ಬದಲಾವಣೆ ಬಗ್ಗೆ ವೈಜ್ಞಾನಿಕ ಅಧ್ಯಯನ ಮಾಡಬೇಕಾದರೆ ಅದಕ್ಕೆ ಕನಿಷ್ಠ 6 ತಿಂಗಳಾದರೂ ಸಮಯ ಬೇಕು. ಎಲ್ಲಕ್ಕಿಂತ ಮಿಗಿಲಾಗಿ ಯೋಜನೆ ಜಾರಿಯಾಗಿ ಒಂದು ವರ್ಷವಾದರೂ ಕಳೆದಿರಬೇಕು. ಅದು ಬಿಟ್ಟು ಹೀಗೆ ತರಾತುರಿಯಲ್ಲಿ ಹೀಗೆ ಮೂರು ದಿನಗಳಲ್ಲಿ ಸಮೀಕ್ಷೆ ಮಾಡಲು ಹೇಗೆ ಸಾಧ್ಯ?

ಗ್ಯಾರೆಂಟಿ ಜಾರಿ ಬಗ್ಗೆ ಖಾಸಗಿ ಸಂಸ್ಥೆಯಿಂದ ಸಮೀಕ್ಷೆ ಮಾಡಿಸಲು ಈಗಾಗಲೇ 1 ಕೋಟಿ ರೂಪಾಯಿ ಪೋಲು ಮಾಡಿದ್ದಾಯ್ತು. ಗ್ಯಾರೆಂಟಿ ಅನುಷ್ಠಾನಕ್ಕೆ ಸಮಿತಿ ರಚಿಸಿ, ಸಿಕ್ಕಸಿಕ್ಕವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ 16 ಕೋಟಿ ರೂಪಾಯಿ ದುಂದು ವೆಚ್ಚ ಮಾಡಿದ್ದಾಯ್ತು. 1.2 ಲಕ್ಷ ‘ಗ್ಯಾರೆಂಟಿ ಸ್ವಯಂ ಸೇವಕರ’ ಹುದ್ದೆ ಸೃಷ್ಟಿಸುವ ಮೂಲಕ 12 ಕೋಟಿ ರೂಪಾಯಿ ವ್ಯರ್ಥ ಮಾಡಿದ್ದಾಯ್ತು.

ಈಗ ಮತ್ತೆ ಈ ಮೂರು ದಿನಗಳ ಸಮೀಕ್ಷೆ ಯಾವ ಪುರುಷಾರ್ಥಕ್ಕಾಗಿ? ಇದರಿಂದ ಸಾಧಿಸಲು ಹೊರಟಿರುವುದಾದರೂ ಏನು? ಎಂದಿದ್ದಾರೆ

Previous articleರೈಲಿಗೆ ಸಿಲುಕಿ ವೃದ್ಧ ಸಾವು
Next articleಕಾಂಗ್ರೆಸ್‌ನ ಎರಡನೇ ಪಟ್ಟಿ 15 ಕ್ಕೆ ಬಿಡುಗಡೆ