ಜನರನ್ನು ಭಿಕ್ಷುಕರಂತೆ ಕಾಣುತ್ತಿರುವ ಕಾಂಗ್ರೆಸ್

ಕಲಬುರಗಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಮುಖ್ಯಮಂತ್ರಿ ಸ್ಥಾನದ ಗೌರವವನ್ನು ಕಳೆದಿರುವ ರಾಜ್ಯದ ಏಕೈಕ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಸಿಎಂ ಸಿದ್ದರಾಮಯ್ಯ ಎಂದರು.
ಕಲಬುರಗಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಸರ್ವರಿಗೂ ಸಾಮಾಜಿಕ ನ್ಯಾಯ ನೀಡುವುದಾಗಿ ಭರವಸೆ ನೀಡಿ, ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತ ಸಿದ್ದರಾಮಯ್ಯ, ಜಾತಿ ಜನಗಣತಿ ಹೆಸರಿನಲ್ಲಿ ಸಮುದಾಯಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ರಾಮರಾಜ್ಯ ನಿರ್ಮಾಣದ ಭರವಸೆ ನೀಡಿ ಅಧಿಕಾರಕ್ಕೆ ಬಂದು ಮೇಲೆ ಯಾಕೋ ಗೊತ್ತಿಲ್ಲಾ ರಾಜ್ಯದ ಜನರನ್ನು ಭಿಕ್ಷುಕರಂತೆ ಕಾಣುತ್ತಿದ್ದಾರೆ. ಎಲ್ಲರಿಗೂ ಉಚಿತ ಪ್ರಯಾಣ ಎಂದು ಹೇಳಿಕೆ ನೀಡಿದ ಸಿಎಂ, ರಾಜ್ಯದ ಈಗಲೂ ಗ್ರಾಮೀಣ ಭಾಗಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ಹೋಗಲು ಬಸ್ ವ್ಯವಸ್ಥೆ ಇಲ್ಲ. ಆರು ಸಾವಿರ ಕೋಟಿ ಹಣ ಕೆಎಸ್‌ಆರ್‌ಟಿಗೆ ಕೊಡುವುದು ಬಾಕಿಯಿದೆ ಎಂದು ಹೇಳಿದರು.
ಕಾಂಗ್ರೆಸ್ ನೀತಿಯಿಂದಾಗಿ ರಾಜ್ಯದಲ್ಲಿ ಉದ್ಯಮಿಗಳು ಬಂದು ಹೂಡಿಕೆ ಮಾಡುತ್ತಿಲ್ಲ.ಇವರ ನೀತಿಗಳಿಂದ ದೊಡ್ಡ ದೊಡ್ಡ ಉದ್ಯಮಿಗಳು ಹೊರ ದೇಶಕ್ಕೆ ಹೋಗುತ್ತಿದ್ದಾರೆ. ನಾಡಿನ ರೈತರ ಬಗ್ಗೆ ಚಿಂತನೆ ಮಾಡದ ಸಿದ್ದರಾಮಯ್ಯ ಅವರು, ಒಂದು ಕೈಗೆ ಕೊಟ್ಟು ಇನ್ನೊಂದು ಕೈಯಿಂದ ಕಸಿದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ೨ ಸಾವಿರ ಕೊಟ್ಟು ೨೫ ಸಾವಿರ ಕಸಿದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.