ಜಗದೀಶ ಶೆಟ್ಟರ ಹಿಂದೆ ವೀರಶೈವ ಲಿಂಗಾಯತ ಸಮಾಜವಿಲ್ಲ

0
18

ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಕಾಂಗ್ರೆಸ್ ಪಕ್ಷ ಮತ್ತು ವೀರಶೈವ ಲಿಂಗಾಯತ ಸಮಾಜಕ್ಕೆ ವಿಶ್ವಾಸ ದ್ರೋಹ ಬಗೆದಿದ್ದಾರೆ. ಸಿದ್ಧಾಂತ, ತತ್ವ ಧಿಕ್ಕರಿಸಿ ಬಿಜೆಪಿಗೆ ಹೋಗಿದ್ದಾರೆ. ಅವರೊಬ್ಬ ನೀತಿಗೆಟ್ಟ ರಾಜಕಾರಣಿಯಾಗಿದ್ದು, ಇಂಥವರ ಹಿಂದೆ ವೀರಶೈವ ಲಿಂಗಾಯತ ಸಮುದಾಯ ಇಲ್ಲ ಎಂದು ಕಾಂಗ್ರೆಸ್ ಪಕ್ಷ ಬೆಂಬಲಿತ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಘೋಷಣೆ ಮಾಡಿದ್ದಾರೆ.

ರವಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಮುಖಂಡರಾದ ಮೋಹನ್ ಲಿಂಬಿಕಾಯಿ, ಶರಣಪ್ಪ ಕೊಟಗಿ, ವಿಜಯ ಕುಲಕರ್ಣಿ, ಬಾಪುಗೌಡ ಪಾಟೀಲ, ಎಂ.ಎಸ್ ಅಕ್ಕಿ ಸೇರಿದಂತೆ ಅನೇಕ ನಾಯಕರು ಜಗದೀಶ ಶೆಟ್ಟರ ಅವರ ಬಗ್ಗೆ ಆಕ್ರೋಶ ಹೊರ ಹಾಕಿದರು.

ಜಗದೀಶ ಶೆಟ್ಟರ ಅವರ ಹಿಂದೆ ವೀರಶೈವ ಲಿಂಗಾಯತ ಸಮಾಜ ಇಲ್ಲ. ಅವರ ಹಿಂದೆ ಜನರೂ ಇಲ್ಲ. ಜನಮನ್ನಣೆಯೂ ಇಲ್ಲ ಎಂಬುದು ಕಳೆದ ವಿಧಾನ ಸಭಾ ಚುನಾವಣೆಯಲ್ಲೇ ಸಾಬೀತಾಗಿದೆ. ೩೫ ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. ಬಿಜೆಪಿಗೆ ಒಂದು ವೇಳೆ ತಾಕತ್ತು ಇದ್ದರೆ, ಜಗದೀಶ ಶೆಟ್ಟರ ಅವರ ಹಿಂದೆ ವೀರಶೈವ ಲಿಂಗಾಯತ ಸಮಾಜ ಇದೆ ಎಂದು ಭಾವಿಸಿದ್ದರೆ ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ಶೆಟ್ಟರ್ ಗೆ ಕೊಟ್ಟು ನೋಡಲಿ. ನಮ್ಮ ಸಮಾಜದ ತಾಕತ್ತು ಏನು ಎಂಬುದನ್ನು ತೋರಿಸುತ್ತೇವೆ ಎಂದು ಸವಾಲು ಹಾಕಿದರು.

ಜಗದೀಶ ಶೆಟ್ಟರ ಹುಬ್ಬಳ್ಳಿ -ಧಾರವಾಡದ ನೀತಿಶ್‌ಕುಮಾರ್!
ಅಧಿಕಾರಲಾಲಸೆಗಾಗಿ, ಸ್ಥಾನಮಾನಕ್ಕಾಗಿ ಬಿಹಾರದ ಜೆಡಿಯು ನಾಯಕ ನಿತೀಶ್‌ಕುಮಾರ್ ಅವರು ಏನನ್ನಾದರೂ ಮಾಡುತ್ತಾರೆ. ಯಾರೊಂದಿಗೆ ಬೇಕಾದರೂ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬ ಮಾತಿದೆ. ಅವರಂತೆಯೇ ಜಗದೀಶ ಶೆಟ್ಟರ ಹುಬ್ಬಳ್ಳಿ-ಧಾರವಾಡದ ನಿತೀಶ್‌ಕುಮಾರ್ ಆಗಿದ್ದಾರೆ. ಸ್ವಾರ್ಥಕ್ಕಾಗಿ ಎಂತಹ ರಾಜಕಾರಣ ಮಾಡಲೂ ಸರಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಲಿಂಬಿಕಾಯಿ ಕಿಡಿಕಾರಿದರು.

Previous articleಶಾಮನೂರ ವಯಸ್ಸಾದ ವ್ಯಕ್ತಿ, ಬಾಯಿ ತಪ್ಪಿ ಹೇಳಿದ್ದಾರೆ
Next articleಕಾಂಗ್ರೆಸ್ ಅಧಿಕಾರ ದರ್ಪ: ಬಿ.ವೈ ವಿಜಯೇಂದ್ರ ಆರೋಪ