ಬೆಂಗಳೂರು: ನಿರಂತರವಾಗಿ ಏರಿಕೆಯಾಗುತ್ತಿರುವ ಚಿನ್ನದ ಬೆಲೆ ಇದೀಗ ೧೦ ಗ್ರಾಮ್‌ಗೆ ೮೯,೬೦೦ ರೂ.ಗೆ ತಲುಪಿದೆ. ಬೆಂಗಳೂರಿನ ಚಿಲ್ಲರೆ ಮಾರುಕಟ್ಟೆಯಲ್ಲಿ ೧೦ ಗ್ರಾಮ್ ಶುದ್ಧ ಚಿನ್ನದ ದರ (೨೪ ಕ್ಯಾರೆಟ್) ಮಂಗಳವಾರ ೮೯,೬೦೦ ರೂ. ಇತ್ತು. ಗ್ರಾಹಕರು ಚಿನ್ನದ ಬಿಸ್ಕತ್ ಕೊಳ್ಳುವುದಾದರೆ ಶೇ.೩ರ ಜಿಎಸ್‌ಟಿ ಸೇರಿಸಿ ೯೨,೩೬೦ ರೂ. ನೀಡಬೇಕಾಗಿದೆ!
ಆಭರಣ ಚಿನ್ನದ ದರ ಇದಕ್ಕಿಂತ ಕೊಂಚ ಕಡಿಮೆಯಿದೆ. ಆದರೆ ಅದೂ ಸಾಮಾನ್ಯ ಗ್ರಾಹಕರ ಕೈಗೆಟುಕದಂತಾಗಿದೆ. ಬೆಳ್ಳಿ ಬೆಲೆ ಕೂಡ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಒಂದು ಕೆ.ಜಿ. ಶುದ್ಧ ಬೆಳ್ಳಿ ಬೆಲೆ ಬರೋಬ್ಬರಿ ೧ ಲಕ್ಷ ರೂ.ಗೆ ತಲುಪಿದೆ.
ಸತತ ಏಳು ದಿನಗಳ ಏರಿಕೆಯ ನಂತರ ಚಿನ್ನದ ದರ ಮಂಗಳವಾರ ೨೦೦ ರೂ. ಮತ್ತು ಬೆಳ್ಳಿ ದರ ೯೦೦ ರೂ. ಇಳಿಕೆಯಾಗಿದೆ.
ಸೆನ್ಸೆಕ್ಸ್ ಮಹಾಪತನ
ಸತತ ಐದು ದಿನಗಳಿಂದ ಭಾರತೀಯ ಷೇರು ಮಾರುಕಟ್ಟೆ ಕುಸಿಯುತ್ತಿದ್ದು, ಮಂಗಳವಾರ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಬರೋಬ್ಬರಿ ೧೦೧೮ ಅಂಕ ಕುಸಿತ ಕಂಡಿದೆ. ನಿಫ್ಟಿ ಕೂಡ ಕುಸಿತವಾಗಿದೆ. ಕಳೆದ ಐದು ದಿನಗಳಲ್ಲಿ ಷೇರು ಸೂಚ್ಯಂಕ ಶೇ.೩ರಷ್ಟು ಕುಸಿತವಾಗಿದ್ದು, ಹೂಡಿಕೆದಾರರಿಗೆ ಈ ಅವಧಿಯಲ್ಲಿ ೧೬.೯೭ ಲಕ್ಷ ಕೋಟಿ ರೂ. ಸಂಪತ್ತು ನಷ್ಟವಾಗಿದೆ.
ಇದು ಟ್ರಂಪ್ ಎಫೆಕ್ಟ್
ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೊಸ ಹೊಸ ತೆರಿಗೆಗಳನ್ನು ಹೇರುತ್ತಿರುವುದು ಜಗತ್ತಿನಾದ್ಯಂತ ಮಾರುಕಟ್ಟೆಗಳಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡುತ್ತಿದೆ.