ಚಿಕ್ಕೋಡಿ ಪ್ರಕರಣ ತಲೆಮಾರಿನ ತಲ್ಲಣ

0
8

ವೃದ್ಧ ತಂದೆತಾಯಿಗಳ ಅಂತ್ಯಕ್ರಿಯೆ ಕಾಲದಲ್ಲಾದರೂ ಮಕ್ಕಳು ಅವರ ಬಳಿ ಇರಬೇಕೆಂದು ಬಯಸುವುದು ತಪ್ಪೇನಲ್ಲ. ಆದರೆ ಮಕ್ಕಳನ್ನು ಕಷ್ಟಪಟ್ಟು ಓದಿಸಿ ಅವರು ವಿದೇಶದಲ್ಲಿ ಹಣ ಸಂಪಾದನೆಯಲ್ಲಿರುವಾಗ ನಮಗಾಗಿ ಬರಬೇಕೆಂದು ಬಯಸುವುದು ಸರಿಯೇ?

ಚಿಕ್ಕೋಡಿಯಲ್ಲಿ ಇತ್ತೀಚೆಗೆ ತಂದೆಯ ಅಂತ್ಯಕ್ರಿಯೆಗೆ ಬಾರದ ಮಕ್ಕಳ ಕತೆ ಇಡೀ ತಲೆಮಾರು ಎದುರಿಸುತ್ತಿರುವ ತಲ್ಲಣವನ್ನು ಸೂಚಿಸುತ್ತದೆ. ಇದು ಒಂದು ಕುಟುಂಬದ ಕತೆಯಲ್ಲ. ಎಲ್ಲರ ಮನೆಯಲ್ಲೂ ಒಂದಲ್ಲ ಮತ್ತೊಂದು ದಿನ ನಡೆಯುವುದು. ಐಟಿ-ಬಿಟಿ ಬಂದ ಮೇಲೆ ವಿದೇಶಗಳಲ್ಲಿ ಭಾರತೀಯ ಬುದ್ಧಿಮತ್ತೆಗೆ ಹೆಚ್ಚು ಬೇಡಿಕೆ ಬಂದಿದೆ. ಹಿಂದೆ ಹೊಸ ಪೀಳಿಗೆಯವರು ವಿದೇಶಗಳಿಗೆ ಹೋಗಲು ಬಯಸಿದರೂ ಸಾಧ್ಯವಾಗುತ್ತಿರಲಿಲ್ಲ. ವೈದ್ಯರಿಗೆ ಮಾತ್ರ ಬೇಡಿಕೆ ಇತ್ತು. ಈಗ ಎಲ್ಲರಿಗೂ ಬೇಡಿಕೆ ಬಂದಿದೆ. ಅದರಲ್ಲೂ ಐಟಿ ಎಂಜಿನಿಯರ್‌ಗಳು ಒಮ್ಮೆ ವಿದೇಶಕ್ಕೆ ಹೆಚ್ಚಿನ ವ್ಯಾಸಂಗಕ್ಕೆ ಹೋದಲ್ಲಿ ಮತ್ತೆ ಹಿಂತಿರುಗಿ ಬರುವುದಿಲ್ಲ. ಅದಕ್ಕೆ ನೂರಾರು ಕಾರಣಗಳಿವೆ. ಮುಖ್ಯವಾಗಿ ಹೆಚ್ಚಿನ ಹಣ ಗಳಿಕೆ. ಹೀಗೆ ಮಕ್ಕಳನ್ನು ಕಳುಹಿಸಿಕೊಟ್ಟು ತಂದೆತಾಯಿಗಳು ತಮ್ಮ ಮಕ್ಕಳು ವಿದೇಶದಲ್ಲಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಕಾಲವೊಂದಿತ್ತು. ಈಗ ಬಹುತೇಕ ಎಲ್ಲರ ಮನೆಯಲ್ಲಿ ಒಬ್ಬರು- ಇಬ್ಬರು ವಿದೇಶದಲ್ಲಿರುವುದು ಸಾಮಾನ್ಯ ಸಂಗತಿ. ಹೀಗಾಗಿ ವೃದ್ಧ ತಂದೆತಾಯಿಗಳಿಗೆ ತಮ್ಮ ಇಳಿವಯಸ್ಸಿನಲ್ಲಿ ಮಕ್ಕಳು ತಮ್ಮ ಬಳಿ ಇರಬೇಕೆಂದು ಬಯಸುವುದು ಈಡೇರದ ಆಸೆ.
ಭಾರತದಲ್ಲಿ ಮಾತ್ರ ಕುಟುಂಬದ ಕಲ್ಪನೆ ಇದೆ. ಅಜ್ಜಿ-ತಾತ-ಮಗ-ಮೊಮ್ಮಗ ಎಲ್ಲರೂ ಒಟ್ಟಿಗೆ ಬದುಕಬೇಕೆಂದು ಬಯಸುತ್ತೇವೆ. ಅದೇ ಸುಖೀ ಸಂಸಾರ ಎಂದು ಭಾವಿಸುತ್ತೇವೆ. ಈಗ ಇದೂ ಕಡಿಮೆಯಾಗಿ ಮಕ್ಕಳು ಒಂದೇ ಊರಿನಲ್ಲಿ, ಒಂದೇ ರಾಜ್ಯದಲ್ಲಿ, ಒಂದೇ ದೇಶದಲ್ಲಿದ್ದರೆ ಸಾಕು ಎಂದು ಬಯಸುತ್ತೇವೆ. ಹಣವೂ ಬೇಕು ಮಕ್ಕಳೂ ಸಮೀಪ ಇರಬೇಕು ಎಂಬುದು ಸಾಧ್ಯವಿಲ್ಲದ ಮಾತು. ಹೀಗಾಗಿ ದೂರದ ದೇಶದಲ್ಲಿರುವ ಮಕ್ಕಳು ತಂದೆತಾಯಿಗಳ ಅಂತ್ಯಕ್ರಿಯೆಗಾದರೂ ಬರಬೇಕು ಎಂದು ಬಯಸುವುದು ಭಾವನಾತ್ಮಕ ವಿಷಯವಾಗಬಹುದೇ ಹೊರತು ವ್ಯವಹಾರಿಕವಾಗಿ ಕಾರ್ಯಸಾಧುವಾಗುವುದಿಲ್ಲ. ಚಿಕ್ಕೋಡಿ ಪ್ರಕರಣದಲ್ಲಿ ಕೆನಡಾದಲ್ಲಿರುವ ಮಗಳು ತಂದೆಯ ಅಂತ್ಯಕ್ರಿಯೆಗೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದು ನಮಗೆ ಕ್ರೂರ ಎನಿಸಬಹುದು. ಆಲ್ಲಿ ಆಕೆಯ ಪರಿಸ್ಥಿತಿ ಹೇಗಿದೆಯೋ ತಿಳಿಯದ ಸಂಗತಿ. ಹಿಂದೆ ಶಿಕ್ಷಣ ಮತ್ತು ಉದ್ಯೋಗ ಒಂದೇ ಕಡೆ ಅಥವ ಸ್ವಲ್ಪ ದೂರದಲ್ಲೇ ಇರುತ್ತಿತ್ತು. ಹೀಗಾಗಿ ಕುಟುಂಬದ ಸಂಬಂಧಗಳು ಹಾಗೆ ಉಳಿಯಲು ಅವಕಾಶಗಳಿತ್ತು. ಈಗ ಯುವ ಜನಾಂಗ ಓದುವುದು ಒಂದೇ ದೇಶದಲ್ಲಾದರೆ ಉದ್ಯೋಗ ಮಾಡುವುದು ಮತ್ತೊಂದು ದೇಶ. ಈಗಂತೂ ಬೇರೆ ದೇಶಗಳ ಕರೆನ್ಸಿಯನ್ನು ತಿಳಿದುಕೊಂಡು ವ್ಯವಹಾರ ನಡೆಸುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಲ್ಲರೂ ವಿಶ್ವಪ್ರಜೆಗಳಾಗಬೇಕೆಂದು ಬಯಸುತ್ತೇವೆ. ಇಂದಿನ ಯುವಕರಿಗೆ ಭಾಷೆ ಸಮಸ್ಯೆಯೇ ಅಲ್ಲ. ಅವರು ಸ್ಥಳೀಯ ಭಾಷೆಯನ್ನು ಸುಲಭವಾಗಿ ಕಲಿತು ಬಿಡುತ್ತಾರೆ. ಹೀಗಿರುವಾಗ ಅವರನ್ನು ನಮ್ಮ ಭೂಮಿ, ನಮ್ಮ ದೇಶ ಎಂದು ಕಟ್ಟಿಹಾಕುವುದು ಕಷ್ಟ. ಈಗಾಗಲೇ ಹಳೆ ಮತ್ತು ಹೊಸ ತಲೆಮಾರಿನ ನಡುವೆ ಸಾಕಷ್ಟು ಅಂತರ ಮೂಡಿದೆ. ಯುವಕರು ಬಹುತೇಕ ವಿಷಯಗಳನ್ನು ಒಪ್ಪುವುದಿಲ್ಲ. ಅಮೆರಿಕ ಮತ್ತಿತರ ಕಡೆಗಳಲ್ಲಿ ಭಾರತ-ಚೀನಾ- ಪಾಕ್ ವಿದ್ಯಾರ್ಥಿಗಳು ಒಟ್ಟಿಗೆ ಜಿವಿಸುವಾಗ ಮಕ್ಕಳನ್ನು ನಾವು ಸಂಪ್ರದಾಯಗಳಿಂದ ಕಟ್ಟಿ ಹಾಕಲು ಬರುವುದಿಲ್ಲ. ಹೆಚ್ಚು ನಿರ್ಬಂಧ ವಿಧಿಸಿದರೆ ಅವರು ಸಂಪ್ರದಾಯವನ್ನೇ ಧಿಕ್ಕರಿಸಲು ಮಾನಸಿಕವಾಗಿ ಸಿದ್ಧ ಇರುತ್ತಾರೆ. ಸಮಾಜದ ಕಟ್ಟುಪಾಡುಗಳು ಆಯಾ ಕಾಲಕ್ಕೆ ಮಾತ್ರ ಅನ್ವಯಿಸುತ್ತದೆ. ಜನಜೀವನ ಬದಲಾದಂತೆ ಹೊಸ ಮತ್ತು ಹಳೆ ತಲೆಮಾರಿನವರು ತಮ್ಮ ಚಿಂತನೆಗಳನ್ನು ಬದಲಿಸಿಕೊಳ್ಳುವುದು ಅನಿವಾರ್ಯ.
ಈ ವಿಷಯದಲ್ಲಿ ತಲೆಮಾರಿನ ನಡುವೆ ಇರುವ ಮಾನಸಿಕ ಅಂತರ ಕಾರಣ ಎಂಬುದರಲ್ಲಿ ಸಂದೇಹವಿಲ್ಲ. ತಂದೆ ಸತ್ತಾಗ ಮಗ ಅಂತ್ಯಕ್ರಿಯೆ ನೆರವೇರಿಸುವುದು ಸಂಪ್ರದಾಯ. ಬೇರೆಯವರು ನೆರವೇರಿಸಿದರೆ ಅದು ಪುಣ್ಯದ ಕೆಲಸ. ಸಾಮಾಜಿಕ ಪದ್ಧತಿಗಳು ಆಯಾ ಕಾಲಕ್ಕೆ ಬದಲಾಗುವುದು ಸಹಜ. ತಂದೆ-ಮಕ್ಕಳ ಸಂಬಂಧ ಕೂಡ ಈಗ ಸಂಕ್ರಮಣ ಕಾಲದಲ್ಲಿದೆ. ಈ ಸಂದರ್ಭದಲ್ಲಿ ಹಳೆ- ಹೊಸ ತಲೆಮಾರು ಹಾಗೂ ಸಮುದಾಯ ಕಾರ್ಯಸಾಧು ಮಾರ್ಗ ಕಂಡುಕೊಳ್ಳುವುದು ಅಗತ್ಯ.

Previous articleಯಾವುದು ಶಾಶ್ವತ ಹಿತವಲ್ಲ
Next articleಮಾಜಿ ಸಿಎಂ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲು