ಗಾಯಕನಾಗುವೆ, ಇಲ್ಲವೇ ದನಕಾಯುವೆ ಎಂದ ತಿಗಡೇಸಿ

ತಿಗಡೇಸಿ ಕಂಠ ಕೋಗಿಲೆ ಕಂಠ. ಅದೇನು ಹಾಡುತ್ತಾನೆ ಅಬ್ಬ..! ನನಗೆ ತುಂಬಾ ಇಷ್ಟ ಎಂದು ಕರಿಭೀಮವ್ವ ಅದ್ಯಾರ ಮುಂದೆಯೋ ಹೇಳಿದ್ದಳಂತೆ. ಇದು ತಿಗಡೇಸಿ ಕಿವಿಗೆ ಬಿದ್ದಿದ್ದೇ ತಡ ಆದರೆ ನಾನು ಗಾಯಕನಾಗುವೆ-ಇಲ್ಲದಿದ್ದರೆ ದನ ಕಾಯುವೆ ಎಂದು ಘೋಷಿಸಿದ. ಅಂದಿನಿಂದ ಶಾಲೆ ಕಾಲೇಜು ಬಿಟ್ಟು ಮನೆಯಲ್ಲಿ ಹಾಡತೊಗಡಿದ. ಹಗಲು-ರಾತ್ರಿ ಯಾವುದನ್ನೂ ಆತ ಲೆಕ್ಕಿಸದೇ ಹಾಡುತ್ತಿದ್ದ. ಬೇಸತ್ತ ಪಕ್ಕದ ಮನೆಯವರು ಜಗಳವಾಡಿದರು. ಅದಕ್ಕೆ ತಿಗಡೇಸಿ ನನ್ನ ಸಾಧನೆಗೆ ಅಡ್ಡಿ ಪಡಿಸಿದ್ದಾರೆ ಎಂದು ಅವರ ಮೇಲೆ ಪೊಲೀಸ್ ಕಂಪ್ಲೇಂಟ್ ಮಾಡಿದ. ಹಾಡುಗಾರನಿಗೆ ಅವಮಾನ ಮಾಡುತ್ತೀಯ ಎಂದು ಪೊಲೀಸರು
ಪಕ್ಕದ ಮನೆಯವರಿಗೆ ಸಿಕ್ಕಾಪಟ್ಟೆ ಚಾರ್ಜ್ ಮಾಡಿದರು. ಒಂದು ದಿನ ತಿಗಡೇಸಿ ಹಾಡಲಿಲ್ಲ-ಪಕ್ಕದ ಮನೆಯವರು ಖುಷಿಯಾಗಿದ್ದರು. ಮರುದಿನ ತಿಗಡೇಸಿ ಹಾಡು ಶುರುಮಾಡಿದ. ತಲೆಕೆಟ್ಟ ಪಕ್ಕದ ಮನೆಯವರು ಮನೆ ಖಾಲಿ ಮಾಡಿಕೊಂಡು ಹೋದರು. ನಾನು ಹಾಡುತ್ತೇನೆ ಬನ್ನಿ ಎಂದು ಗೆಳೆಯರಿಗೆ ಆಹ್ವಾನ ಕೊಟ್ಟು ಕರೆಯಿಸಿಕೊಂಡು ಅವರ ಮುಂದೆ ಗಾಯನ ಪ್ರಸ್ತುತ ಪಡಿಸುತ್ತಿದ್ದ. ಗೆಳೆಯರಿಗೆ ಸಾಕಾಗಿ ಹೋಗಿತ್ತು. ಊರಲ್ಲೆಲ್ಲ ತಿಗಡೇಸಿ ಗಾಯನದ ಬಗ್ಗೆಯೇ ಚರ್ಚೆಯಾಗುತ್ತಿತ್ತು. ಆತನಿಗೆ ಗಾಯನವೊಂದೇ ಮುಖ್ಯವಾಗಿತ್ತು. ಕೆಲವರು ನಿನ್ನ ಕಂಠ ಚೆನ್ನಾಗಿದೆ ಎಂದರೆ ಸಾಕು ಅವರನ್ನು ಕಟ್ಟೆಯ ಮೇಲೆ ಕೂಡಿಸಿ ತಾನು ಹಾಡಲು ಶುರುಮಾರುತ್ತಿದ್ದ. ಬರಬರುತ್ತ ಜನರು ತಿಗಡೇಸಿಯನ್ನು ಕಂಡರೆ ಇನ್ನೊಂದು ರಸ್ತೆಯಿಂದ ಹೋಗುತ್ತಿದ್ದರು. ಎಲ್ಲಿಯಾದರೂ ಸಂಗೀತ ಕಾರ್ಯಕ್ರಮ ನಡೆದರೆ ನನ್ನನ್ನೂ ಅದರಲ್ಲಿ ಸೇರಿಸಿ ಎಂದು ತಿಗಡೇಸಿ ದುಂಬಾಲು ಬೀಳುತ್ತಿದ್ದ. ದೊಡ್ಡದೊಡ್ಡವರಿಂದ ಹೇಳಿಸುತ್ತಿದ್ದ. ಅವತ್ತು ಬಯಲನುಮಪ್ಪನ ಗುಡಿಯ ಮುಂದೆ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ತಿಗಡೇಸಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಗೀತ ಕಾರ್ಯಕ್ರಮದ ನಂತರ ಜನರು ತಿಗಡೇಸಿಯನ್ನು ಕರೆದುಕೊಂಡು ಬಂದವರನ್ನು ಹುಡುಕಾಡಿ ಬಡಿದರು. ಈ ಘಟನೆ ಎಲ್ಲೆಲ್ಲೂ ಹರಡಿ ಕೊನೆಗೆ ತಿಗಡೇಸಿಯನ್ನು ಯಾರೂ ಕರೆಯಲಿಲ್ಲ. ವಯಸ್ಸೂ ಮುಗಿದಿತ್ತು. ಎಲ್ಲೂನೌಕರಿ ಸಿಗಲಿಲ್ಲ. ಈಗ ತಿಗಡೇಸಿ ಆಟೋದಲ್ಲಿ ಕುಳಿತು ನಾಟಕಗಳ ಅನೌನ್ಸ್ಮೆಂಟ್ ಮಾಡುತ್ತ ತಿರುಗಾಡುತ್ತಿದ್ದಾನೆ.