Home ಅಪರಾಧ ಕುಡುಕ ಮಗನ ಕೊಂದ ತಂದೆ

ಕುಡುಕ ಮಗನ ಕೊಂದ ತಂದೆ

0

ಬೆಳಗಾವಿ: ಕುಡಿದು ಬಂದು ಜಗಳವಾಡುತ್ತಿದ್ದ ಕಿರಿಯ ಮಗನನ್ನು ತಂದೆಯೇ ಹಿರಿಯ ಮಗನ ಜೊತೆ ಸೇರಿ ಹತ್ಯೆ ಮಾಡಿದ ಘಟನೆ ಚನ್ನಮ್ಮನ ಕಿತ್ತೂರು ತಾಲೂಕಿನ ಚಿಕ್ಕನಂದಿಹಳ್ಳಿಯಲ್ಲಿ ನಡೆದಿದೆ.
ಮಂಜುನಾಥ ಉಳ್ಳಾಗಡ್ಡಿ(25) ಕೊಲೆಯಾದ ದುರ್ದೈವಿ. ಕುಡಿದು ಬಂದು ನಿತ್ಯ ತಂದೆ-ತಾಯಿ ಜೊತೆ ಮಂಜುನಾಥ ಜಗಳವಾಡುತ್ತಿದ್ದನಂತೆ. ನಿನ್ನೆ ರಾತ್ರಿಯೂ ಕುಡಿದು ಬಂದು ತಂದೆ-ತಾಯಿಯ ಜೊತೆ ಜಗಳವಾಡುವಾಗ ತಂದೆ, ತಾಯಿ, ಅಣ್ಣ ಬುದ್ಧಿವಾದ ಹೇಳಲು ಪ್ರಯತ್ನ ಮಾಡಿದ್ದಾರೆ. ಈ ವೇಳೆ ತಂದೆ-ತಾಯಿಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ಅಣ್ಣ ಗುರುಬಸಪ್ಪ ಹಾಗೂ ತಂದೆ ನಾಗಪ್ಪ, ಮಂಜುನಾಥ ಮೇಲೆ ಹಲ್ಲೆ ಮಾಡಿದ್ದು ಸ್ಥಳದಲ್ಲಿಯೇ ಆತ ಮೃತಪಟ್ಟಿದ್ದಾನೆ ಎಂದು ಬೆಳಗಾವಿ ಎಸ್‌ಪಿ ಡಾ. ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
ಇನ್ನು ಕೊಲೆಯಾದ ಮಂಜಪ್ಪನ ನಿಶ್ಚಿತಾರ್ಥವೂ ಆಗಿತ್ತು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂಜಪ್ಪನ ಅಣ್ಣ ಗುರುಬಸಪ್ಪ ತಮ್ಮನ ಮದುವೆ ಮಾಡಲೆಂದು ಬಂದಿದ್ದನಂತೆ. ಆದ್ರೆ ಕುಡಿತದ ದಾಸನಾಗಿದ್ದ ಮಂಜಪ್ಪ ಕುಡಿದು ಗಲಾಟೆ ಮಾಡುವ ವೇಳೆ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Exit mobile version