ಕಿಮ್ಸ್ ಪ್ರಾಧ್ಯಾಪಕನ ವರ್ಗಾವಣೆ ರದ್ದುಗೊಳಿಸಿದ ಹೈಕೋರ್ಟ್

0
19

ಧಾರವಾಡ: ಕಿಮ್ಸ್‌ ಫಾರ್ಮ್ಕಾಲಜಿ ವಿಭಾಗದ ಮುಖ್ಯಸ್ಥ ಡಾ. ಎ.ಎನ್.ದತ್ತಾತ್ರಿ ಅವರನ್ನು ಚಾಮರಾಜನಗರಕ್ಕೆ ವರ್ಗಾವಣೆ ಮಾಡಿದ್ದ ರಾಜ್ಯ ಸರಕಾರದ ಆದೇಶವನ್ನು ಧಾರವಾಡ ಉಚ್ಚ ನ್ಯಾಯಾಲಯ ರದ್ದುಗೊಳಿಸಿ ಆದೇಶ ನೀಡಿದೆ.
೨೦೧೫ರಲ್ಲಿ ಕಿಮ್ಸ್ ಫಾರ್ಮ್ಕಾಲಜಿ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಜಾನಕಿ ತೊರವಿ ಮಾನಸಿಕ ಹಿಂಸೆಯ ಆರೋಪದಡಿ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆಯೋಗದ ಸೂಚನೆಯಂತೆ ಅಂದಿನ ನಿರ್ದೇಶಕ ಡಾ. ದತ್ತಾತ್ರೇಯ ಬಂಟ್ ಅಂದಿನ ಪ್ರಾಚಾರ್ಯ ಡಾ. ಕೆ.ಎಫ್.ಕಮ್ಮಾರ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದ್ದರು. ಸಮಿತಿ ಡಾ. ಎ.ಎನ್.ದತ್ತಾತ್ರಿ ಅವರನ್ನು ದೋಷಿ ಎಂದು ತೀರ್ಮಾನಿಸಿತು. ನಿರ್ದೇಶಕ ಡಾ. ಡಿ.ಡಿ.ಬಂಟ್ ಅವರ ಶಿಫಾರಸಿನ ಮೇಲೆ ದತ್ತಾತ್ರಿ ಅವರನ್ನು ಚಾಮರಾಜನಗರಕ್ಕೆ ವರ್ಗಾವಣೆ ಮಾಡಲಾಯಿತು.
ಯಾವುದೇ ಆಧಾರ ಇಲ್ಲದಿದ್ದರೂ ಕ್ರಮ ಕೈಗೊಂಡು ವರ್ಗಾವಣೆ ಮಾಡಲಾಗಿದೆ. ತಮ್ಮನ್ನು ಬಲಿಪಶು ಮಾಡಲಾಗಿದೆ ಎಂದು ಆರೋಪಿಸಿ ಡಾ. ದತ್ತಾತ್ರಿ ಧಾರವಾಡ ಉಚ್ಚ ನ್ಯಾಯಾಲಯ ಮೆಟ್ಟಿಲೇರಿದ್ದರು. ಸದರಿ ಆದೇಶಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ರಾಜಕೀಯ ಪ್ರಭಾವದಿಂದ ಡಾ. ದತ್ತಾತ್ರಿ ಅವರನ್ನು ಚಾಮರಾಜನಗರಕ್ಕೆ ನಿಯೋಜನೆ ಮಾಡಿಸಿದ್ದಲ್ಲದೇ ವಿಭಾಗ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಮತ್ತೆ ಡಾ. ದತ್ತಾತ್ರಿ ಕೋರ್ಟ್ ಮೆಟ್ಟಿಲೇರಿದ್ದರಿಂದ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿತ್ತು.
ತಡೆಯಾಜ್ಞೆ ಇದ್ದರೂ ತಮ್ಮನ್ನು ವಿಭಾಗದ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿಸಿ ಸರಕಾರ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಡಾ. ದತ್ತಾತ್ರಿ ಮತ್ತೊಂದು ಪ್ರಕರಣ ದಾಖಲಿಸಿದ್ದರು. ಕೋರ್ಟ್ ಕ್ಷಮೆಯಾಚಿಸಿದ ರಾಜ್ಯ ಸರಕಾರ ಕಾನೂನು ಬಾಹಿರ ತೀರ್ಮಾನವನ್ನು ಜಾರಿಗೊಳಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿತ್ತು.
ಡಾ. ದತ್ತಾತ್ರಿ ಅವರ ಪ್ರಕರಣ ವಿಚಾರಣೆಗೆ ಬಂದಾಗ ನ್ಯಾಯವಾದಿ ವಿಶ್ವನಾಥ ಹೆಗಡೆ ಅವರ ವಾದವನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಎನ್.ಎಸ್.ಸಂಜಯಗೌಡ ಅವರು ನಿಯಮ ಬಾಹಿರವಾದ ಆದೇಶವನ್ನು ರದ್ದುಗೊಳಿಸಿದರು. ಇದು ಕೇವಲ ಆಡಳಿತ ಹಿತದೃಷ್ಟಿಯಿಂದ ಕೈಗೊಂಡ ಆದೇಶವಾಗಿದೆ. ಒಂದು ವೇಳೆ ವರ್ಗಾವಣೆಗೆ ಅಸಾಧಾರಣ ಕಾರಣಗಳಿದ್ದರೆ ಅವುಗಳಿಗೆ ಕಿಮ್ಸ್ ಹಾಗೂ ವರ್ಗಾವಣೆ ಮಾಡಲಾದ ಕಾಲೇಜಿನ ಆಡಳಿತ ಮಂಡಳಿಗಳಿಂದ ಒಪ್ಪಿಗೆ ಪಡೆಯಬೇಕು. ಆದರೆ, ಉಭಯ ಆಡಳಿತ ಮಂಡಳಿಗಳ ಒಪ್ಪಿಗೆ ಪಡೆಯದೇ ಮಾಡಿದ ನಿಯಮ ಬಾಹಿರ ವರ್ಗಾವಣೆ ಇದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Previous articleಜಗದೀಶ್ ಶೆಟ್ಟರ್ ಏನು ದಡ್ಡರಾ?
Next articleನಲಪಾಡ್ ವಿರುದ್ಧ ಎಫ್‌ಐಆರ್