ಇಳಕಲ್ : ಹುಚನೂರ ಇಳಕಲ್ ರಸ್ತೆಯಲ್ಲಿ ಇರುವ ಹೊಲದಲ್ಲಿನ ಗುಡಿಸಲಿಗೆ ಬೆಂಕಿ ಹಚ್ಚಿದ್ದರಿಂದ ಗುಡಿಸಲು ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಒಳಗಿದ್ದ ಅಕ್ಕಡಿಕಾಳು ಭಸ್ಮ ಆಗುವ ಜೊತೆಗೆ ಆಕಳು ಸಜೀವವಾಗಿ ದಹನಗೊಂಡಿದೆ.
ಮೂಲತಃ ಹೂಲಗೇರಿ ಗ್ರಾಮದವರಾದ ಶಿವಪ್ಪ ಗೋನಾಳ ಎಂಬುವರ ಗುಡಿಸಲಿಗೆ ಯಾರೋ ಕಿಡಿಗೇಡಿಗಳು ರಾತ್ರಿಯ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.ಗುಡಿಸಲು ಸುಡುತ್ತಿರುವದನ್ನು ನೋಡಿದ ಅಲ್ಲಿಯೇ ಪಕ್ಕದಲ್ಲಿ ಗುಡಿಸಲು ಹಾಕಿಕೊಂಡಿರುವ ರಸೂಲ ಬಂಗಾಲಿ ಕುಟುಂಬದವರು ಸ್ಥಳಕ್ಕೆ ಧಾವಿಸಿ ಗುಡಿಸಲಿನಲ್ಲಿ ಇದ್ದ ಎಮ್ಮೆ ಮತ್ತು ಆಕಳುಗಳನ್ನು ಹೊರಗೆ ಓಡಿಸಿದ್ದಾರೆ.
ಗುಡಿಸಲು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು ಅದರಲ್ಲಿ ಇದ್ದ ಎಲ್ಲಾ ವಸ್ತುಗಳು ನಾಶವಾಗಿವೆ ಶಿವಪ್ಪ ಇಳಕಲ್ ಶಹರ್ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾನೆ ಸ್ಥಳಕ್ಕೆ ಭೇಟಿ ನೀಡಿದ ಪಿಎಸ್ ಐ ಷಹಜಹಾನ ನಾಯಕ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಳೆದ ಒಂದು ವಾರದ ಹಿಂದೆ ಇದೇ ರಸ್ತೆಯಲ್ಲಿ ಇದ್ದ ಪಂಚರ್ ಅಂಗಡಿಯೊಂದಕ್ಕೆ ಬೆಂಕಿ ಹಚ್ಚಿದ್ದನ್ನು ಇಲ್ಲಿ ಸ್ಮರಿಸಬಹುದು.