ಚಿಕ್ಕಮಗಳೂರು: ಕಳಸ ತಾಲ್ಲೂಕು ಹಳುವಳ್ಳಿ ಸಮೀಪದ ಲಲಿ ತಾದ್ರಿ ಗ್ರಾಮದ ರಘುಪತಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಕೋಣ ತಿವಿದು ಮೃತಪಟ್ಟ ಬೆನ್ನಲ್ಲೆ ತಣಿಗೆಬೈಲು ವನ್ಯ ಜೀವಿ ವ್ಯಾಪ್ತಿಯ ಕತ್ಲೆಖಾನ್ ಎಸ್ಟೇಟ್‌ನಲ್ಲಿ ಕಾಫಿ ಕೊಯ್ಯಲು ತೆರಳುತ್ತಿದ್ದ ವಿನೋಬಬಾಯಿ(೪೦) ಎಂಬುವರ ಮೇಲೆ ಕಾಡಾನೆ ದಾಳಿ ನಡೆಸಿದ್ದು ಕಾರ್ಮಿಕ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ನ.ರಾ.ಪುರ ತಾಲ್ಲೂಕು ತರೀಕೆರೆ ಅರಣ್ಯ ವ್ಯಾಪ್ತಿಯಲ್ಲಿನ ಭದ್ರಾ ಅರಣ್ಯ ವಲಯಕ್ಕೆ ಸೇರಿದ ಕತ್ಲೇಖಾನ್ ಎಸ್ಟೇಟ್‌ನಲ್ಲಿ ಕಾಫಿ ಕೊಯ್ಲು ಮಾಡಲು ತೆರಳುತ್ತಿದ್ದ ವಿನೋಬಬಾಯಿ ಅವರ ಮೇಲೆ ಕಾಡಾನೆ ದಿಢೀರ್ ದಾಳಿ ನಡೆಸಿದೆ. ಈ ವೇಳೆ ಕಾರ್ಮಿಕ ಮಹಿಳೆ ಜೊತೆ ಇಬ್ಬರು ಮಹಿಳೆಯರಿದ್ದು, ಅವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತ ಮಹಿಳೆ ವಿನೋಬಬಾಯಿ ಹರಪನಹಳ್ಳಿ ತಾಲ್ಲೂಕಿನ ಶಿವ ಪುರ ಗ್ರಾಮಕ್ಕೆ ಸೇರಿದವರಾಗಿದ್ದು, ಉದ್ಯೋಗ ಅರಸಿ ಚಿಕ್ಕಮಗಳೂರು ಜಿಲ್ಲೆಗೆ ಬಂದಿದ್ದರು. ಶನಿವಾರ ಬೆಳಿಗ್ಗೆ ನಡೆದ ಘಟನೆಯಿಂದ ಕಾರ್ಮಿಕ ಮಹಿಳೆ ಮೃತಪಟ್ಟಿದ್ದಾಳೆ.