ಕಲಬುರಗಿ: ಜೂನ್ ೧೩ ಮತ್ತು ೧೪ ರಂದು ನಡೆಯುವ ಕಲ್ಯಾಣ ಸಿರಿಯನ್ನು ಕಣ್ತುಂಬಿಕೊಳ್ಳಲು ನಾಡು ಸಜ್ಜಾಗಿದೆ. ಕಲಬುರಗಿಯ ಹೊಸ ಜೇವರ್ಗಿ ರಸ್ತೆಯಲ್ಲಿರುವ ಖಮೀತ್ಕರ್ ಭವನದಲ್ಲಿ ಎರಡು ದಿನ ಅರ್ಥಪೂರ್ಣ ಅಭಿವೃದ್ಧಿ ಚಿಂತನ- ಮಂಥನಗಳು ನಡೆಯಲಿವೆ.
ಕಲಬುರಗಿ ಪ್ರಾಂತದ ಸಂಕಷ್ಟಗಳನ್ನು ಸಹನೀಯವಾಗಿಸುವಲ್ಲ ಪ್ರಧಾನ ಪಾತ್ರವನ್ನು ಸಂಯುಕ್ತ ಕರ್ನಾಟಕ ಒಂಬತ್ತು ದಶಕಗಳಿಂದ ನಿರ್ವಹಿಸುತ್ತ ಬಂದಿದೆ. ೧೯೯೯ ರಲ್ಲಿ ಪ್ರತ್ಯೇಕ ಆವೃತ್ತಿ ಆರಂಭಿಸಿ ಈ ಏಳು ಜಿಲ್ಲೆಗಳ ಜನ ಪರ ಹೋರಾಟಗಳಗೆ ಮತ್ತಷ್ಟು ಬಲ ತುಂಬಿದೆ.
ಹೈದ್ರಾಬಾದ್ ನಿಜಾಮ್ ಸಾಮ್ರಾಜ್ಯದ ವಿರುದ್ಧ ಸ್ಥಳೀಯ ಹೋರಾಟಕ್ಕೆ ಪತ್ರಿಕೆ ತುಂಬಿದ ಬಲ ಇತಿಹಾಸದಲ್ಲಿ ದಾಖಲಾಗಿದೆ.
ಸ್ವಾತಂತ್ರ್ಯ ಚಳವಳಿ ನಂತರದ ಬಹುದೊಡ್ಡ ಹೋರಾಟ ಹೈದ್ರಾಬಾದ್ ವಿಮೋಚನೆಯದ್ದಾಗಿತ್ತು. ಆದ್ದರಿಂದಲೇ ʻಸಂಯುಕ್ತ ಕರ್ನಾಟಕ’ ಈ ಹೋರಾಟಕ್ಕೆ ಕೊಟ್ಟ ಅಕ್ಷರ ಬಲ ವಿಮೋಚನೆಯಷ್ಟೇ ದೊಡ್ಡದಾಗಿತ್ತು. ಆಗ ಕನ್ನಡದಲ್ಲಿ ಇದ್ದ ಏಕೈಕ ಪತ್ರಿಕೆ ʻಸಂಯುಕ್ತ ಕರ್ನಾಟಕ’ ಅಂದು ಹೈದ್ರಾಬಾದ್ ವಿಮೋಚನೆಗೆ ನೀಡಿದ ಕೊಡುಗೆ ಇಂದಿಗೂ ಅಳಿಸಲಾಗದ ದಾಖಲೆ.
ಆ ನಂತರದ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರಗತಿಗೆ ಏನೆಲ್ಲ ಮಾಡಬೇಕು ಎಂಬುದರ ಜಾಗೃತಿ ಮೂಡಿಸಿದ ಪತ್ರಿಕೆ ನಮ್ಮದು. ಹಾಗೆಯೇ ಇಲ್ಲಿನ ಮೂಲ ಸೌಕರ್ಯಗಳು ಮತ್ತು ಯೋಜನೆಗಳಗಾಗಿ ಮುಂಚೂಣಿ ಹೋರಾಟ ಮಾಡಿದೆ. ಇಲ್ಲಿನ ಎಲ್ಲ ಜನಪರ ಹೋರಾಟಗಳಿಗೆ ಅಕ್ಷರ ನಾಯಕತ್ವ ವಹಿಸಿದೆ.
ಹೈದ್ರಾಬಾದ್ ಕರ್ನಾಟಕ ಎಂಬ ಹೆಸರಿನಿಂದ ವಿಮೋಚನೆ ನೀಡಿ, ಕಲ್ಯಾಣ ಕರ್ನಾಟಕ ಎಂಬ ಹೆಸರಿಡಲು ಬೇಡಿಕೆ ಶುರುವಾದಾಗ ಸಂಯುಕ್ತ ಕರ್ನಾಟಕ ಜನರಿಗೆ ಧ್ವನಿಯಾಗಿತ್ತು. ಅದೇ ರೀತಿ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳ ಹೆಸರನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳ ಎಂದು ಮರುನಾಮಕರಣ ಮಾಡುವ ಬೇಡಿಕೆಗೂ ಪತ್ರಿಕೆ ಸಕ್ರಿಯವಾಗಿ ಸ್ಪಂದಿಸಿತ್ತು.
ಸರ್ಕಾರದಿಂದ ಎರಡೂ ಬೇಡಿಕೆಗಳಿಗೆ ಸ್ಪಂದನೆ ದೊರಕಿ ಜನಭಾವನೆ ಈಡೇರಿದಾಗ, ಮಂಡಳಿಗೆ ಹೆಚ್ಚಿನ ಮತ್ತು ವಿಶೇಷಾನುದಾನ ನೀಡುವಂತೆ ಸರ್ಕಾರಕ್ಕೆ ಒತ್ತಡ ಹೇರುವಲ್ಲಿ ಸಂಯುಕ್ತ ಕರ್ನಾಟಕ ಪ್ರಮುಖ ಪಾತ್ರಧಾರಿಯಾಗಿತ್ತು.
ಇದೇ ರೀತಿ, ೩೭೧ನೇ (ಜೆ) ಕಲಂ ಅನ್ವಯ ವಿಶೇಷ ಸ್ಥಾನಮಾನ ದೊರೆಯುವುದಿರಲಿ, ಹೈ ಕೋರ್ಟ್ ಪೀಠ ಸ್ಥಾಪನೆ ಹೋರಾಟವಿರಲಿ, ಕಲಬುರ್ಗಿ ವಿಮಾನ ನಿಲ್ದಾಣ ನಿರ್ಮಾಣ ವಿಷಯವಿರಲಿ, ಆರೋಗ್ಯ- ಶಿಕ್ಷಣ ಮತ್ತು ಕೃಷಿಯಲ್ಲಿ ಈ ಭಾಗಕ್ಕೆ ಅಗತ್ಯವಾದ ಬೇಡಿಕೆಗಳ ಹೋರಾಟಗಳರಲಿ, ಪತ್ರಿಕೆಯ ಪಾತ್ರ ಸಕ್ರಿಯ.
ಕಲ್ಯಾಣ ನಾಡಿನ ಏಳು ಜಿಲ್ಲೆಗಳಿಗೆ ಮೂಲಭೂತ ಸೌಕರ್ಯಗಳು ದೊರೆಯಲೇಬೇಕು ಎಂಬ ಜನಾಭಿಪ್ರಾಯವನ್ನು ಪತ್ರಿಕೆ ಸದಾ ಬೆಂಬಲಿಸುತ್ತ ಬಂದಿದೆ. ಈ ನಾಡಿಗೆ ಪೂರಕವಾದ ಎಲ್ಲ ಚಳವಳಿಗಳಿಗೆ ಸಂಪೂರ್ಣ ಸಹಕಾರ ನೀಡಿ,
ಜನತೆಯ ಅಕ್ಷರ ಸಖನಾಗಿದೆ.
ಕಲ್ಯಾಣ ನಾಡಿನ ಪ್ರಗತಿಗೆ ಪತ್ರಿಕೆಯ ಬದ್ಧತೆ ಎಂದಿಗೂ ಮಾಸದು. ಕಲ್ಯಾಣ ಕರ್ನಾಟಕದ ನೈಜ ಕಲ್ಯಾಣವೇ ಪತ್ರಿಕೆಯ ಪರಮ ಗುರಿ.