ಕರ್ನಾಟಕಕ್ಕೆ ಹೆಚ್ಚುವರಿ ಪ್ರಾದೇಶಿಕ ಕಚೇರಿ

0
12

ನವದೆಹಲಿ: ಭಾರತಮಾಲಾ ಯೋಜನೆಯಡಿ ಅಂಕೋಲಾ-ಹುಬ್ಬಳ್ಳಿ-ಬಿಜಾಪುರ ಹೆದ್ದಾರಿಯನ್ನು ನಾಲ್ಕು ಲೇನ್ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಲು ಮನವಿ ಮಾಡಲಾಯಿತು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ರಸ್ತೆಗಳ ನಿರ್ಮಾಣಕ್ಕೆ ಅನುಮೋದನೆ ಮತ್ತು ಕೇಂದ್ರ ರಸ್ತೆಗಳ ನಿಧಿಯನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ ಉಪಸ್ಥಿತರಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಕರ್ನಾಟಕದಲ್ಲಿ ಅತಿ ಹೆಚ್ಚಿನ ರಾಷ್ಟ್ರೀಯ ಹೆದ್ದಾರಿಗಳ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಲಿದ್ದು, ಇದಕ್ಕಾಗಿ ಯೋಜನಾ ನಿರ್ದೇಶಕರ ಕಚೇರಿಗಳ ಸಂಖ್ಯೆಯನ್ನು 19 ಕ್ಕೆ ಹೆಚ್ಚಿಸಿದೆ. ಪ್ರತಿ 12 ಯೋಜನಾ ನಿರ್ದೇಶಕರ ಕಚೇರಿಗೆ ಒಂದು ಪ್ರಾದೇಶಿಕ ಕಚೇರಿ ವ್ಯವಸ್ಥೆ ಪ್ರತಿ ರಾಜ್ಯಕ್ಕೂ ಇದ್ದು, ಈಗ ಕರ್ನಾಟಕದಲ್ಲಿ ಯೋಜನಾ ನಿರ್ದೇಶಕರ ಸಂಖ್ಯೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ನಾವು ಕರ್ನಾಟಕಕ್ಕೆ ಹೆಚ್ಚುವರಿ ಪ್ರಾದೇಶಿಕ ಕಚೇರಿಯನ್ನು (R.O) ಸ್ಥಾಪಿಸಲು ಮನವಿ ಸಲ್ಲಿಸಿದ್ದೇವೆ. ಎಕ್ಸ್‌ಪ್ರೆಸ್ ಹೈವೇ ಮೇಲ್ದರ್ಜೆಗೆ ಏರಿಸುವ ಭಾರತಮಾಲಾ ಯೋಜನೆಯಡಿ ಅಂಕೋಲಾ-ಹುಬ್ಬಳ್ಳಿ-ಬಿಜಾಪುರ ಹೆದ್ದಾರಿಯನ್ನು ನಾಲ್ಕು ಲೇನ್ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಲು ಮನವಿ ಮಾಡಲಾಯಿತು. ಈಗಾಗಲೇ ನವಲಗುಂದ ಬೈಪಾಸ್ NH-218 ರಸ್ತೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕರಡು ಡಿ.ಪಿ.ಆರ್. ಕೇಂದ್ರಕ್ಕೆ ಸಲ್ಲಿಸಿದ್ದು ಅದನ್ನು ಆದಷ್ಟು ಬೇಗನೆ ಅನುಮೋದಿಸಿ ರಾಜ್ಯ ಸರ್ಕಾರಕ್ಕೆ ಮರಳಿಸುವಂತೆ ಕೋರಲಾಯಿತು.
ನಿತಿನ್ ಗಡ್ಕರಿ ಅವರು ಈಗಾಗಲೇ ಹುಬ್ಬಳ್ಳಿ-ಧಾರವಾಡದ ಹಲವು ಆಂತರಿಕ ರಸ್ತೆ ಯೋಜನೆಗಳಿಗೆ ಅನುದಾನ ನೀಡಿದ್ದಾರೆ. ಇನ್ನೂ ಹೆಚ್ಚಿನ ಆಂತರಿಕ ರಸ್ತೆಗಳ ಅಭಿವೃದ್ಧಿಗೆ ಸಿ.ಆರ್‌ಎಫ್ ಅಡಿಯಲ್ಲಿ ಇನ್ನೂ ಹೆಚ್ಚುವರಿ ಹಣವನ್ನು ಕೋರಲಾಯಿತು.
ಸಚಿವ ನಿತಿನ್ ಗಡ್ಕರಿಯವರಿಂದ ನಮಗೆ ಸಕಾರಾತ್ಮಕ ಸ್ಪಂದನೆ ದೊರೆತಿದ್ದು, ಕುಸುಗಲ್-ನರೇಂದ್ರ ಬೈಪಾಸ್ ಮತ್ತು ಚೆನ್ನಮ್ಮ ವೃತ್ತದಿಂದ ಬಿಡ್ನಾಳ್ ವರೆಗೆ ಮೇಲ್ಸೇತುವೆ ನಿರ್ಮಾಣದ ಪ್ರಸ್ತಾವನೆಗಳು ತಮಗೆ ತಲುಪಿಲ್ಲ ಎಂದು ತಿಳಿಸಿದ ಅವರು, ಅದನ್ನು ತಮಗೆ ಸಲ್ಲಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವಂತೆ ತಿಳಿಸಿದ್ದು ರಾಜ್ಯ ಸರ್ಕಾರಕ್ಕೆ ಈ ಕೂಡಲೇ ಮೇಲ್ಸೇತುವೆ ನಿರ್ಮಾಣದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಲು ಕೋರಿದ್ದೇನೆ ಎಂದಿದ್ದಾರೆ.

Previous articleಪರಿಷತ್ ಸದಸ್ಯ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ರಾಜೀನಾಮೆ
Next articleಶೃಂಗೇರಿ ಶ್ರೀ ಶಾರದ ಪೀಠದ ನೂತನ ಸಿಇಒ ಆಗಿ ಪಿ.ಎ.ಮುರಳಿ ನೇಮಕ