ಧಾರವಾಡ(ಕಲಘಟಗಿ): ಹೊಲದಲ್ಲಿ ರವಿವಾರ ಮಧ್ಯಾಹ್ನ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿದ್ದು, ತೀವ್ರ ಗಾಯಗೊಂಡಿದ್ದ ರೈತನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ದಾಳಿಗೀಡಾದ ರೈತ ಕಲಘಟಗಿ ತಾಲೂಕಿನ ಈಂಚನಾಳ ಗ್ರಾಮದ ಮಾರುತಿ ಲಮಾಣಿ ಎಂಬುವವರಾಗಿದ್ದಾರೆ. ಅಂದಾಜು 55 ವರ್ಷದ ಇವರು ರವಿವಾರ ಮಧ್ಯಾಹ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಹಿಂಬದಿಯಿಂದ ದಾಳಿ ಮಾಡಿದ ಕರಡಿ ರೈತನ ತಲೆ, ಕುತ್ತಿಗೆ, ಬೆನ್ನು ಭಾಗಕ್ಕೆ ತೀವ್ರವಾಗಿ ಕಚ್ಚಿದೆ. ಕೂಡಲೇ ಗಾಯಾಳುವಿಗೆ ಕಲಘಟಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಕಿಮ್ಸ್ ವೈದ್ಯರ ಹೇಳಿಕೆ: ಕರಡಿ ದಾಳಿಗೆ ತುತ್ತಾಗಿ ಚಿಕಿತ್ಸೆಗೆ ದಾಖಲಾಗಿರುವ ರೈತ ಮಾರುತಿ ಅವರ ಆರೋಗ್ಯ ಸ್ಥಿತಿ ಸದ್ಯಕ್ಕೆ ಯಥಾಸ್ಥಿತಿಯಲ್ಲಿದೆ. ಚಿಕಿತ್ಸೆ ಮುಂದುವರಿದಿದೆ ಎಂದು ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್ ಕಮ್ಮಾರ ಸಂಯುಕ್ತ ಕರ್ನಾಟಕಕ್ಕೆ ತಿಳಿಸಿದರು.