ರಾಮಕೃಷ್ಣ ಆರ್.
ಜುಲೈ ೧ ಪತ್ರಿಕಾ ದಿನಾಚರಣೆ. ಕನ್ನಡ ಪತ್ರಿಕೋದ್ಯಮ ಹುಟ್ಟಿದ ದಿನ. ಕನ್ನಡ ಭಾಷೆಯ ಮೊದಲ ಮುದ್ರಿತ ಪತ್ರಿಕೆ ಆರಂಭಗೊಂಡದ್ದು ಜು. ೧ರಂದು. ಜರ್ಮನಿಯ ಬಾಸೆಲ್ ಮಿಷನರಿಯ ಹರ್ಮನ್ ಮೊಗ್ಲಿಂಗ್ ಜು.೧ ೧೯೪೩ರಲ್ಲಿ ತುಳುನಾಡು ಮಂಗಳೂರಿನಲ್ಲಿ ಮಂಗಳೂರು ಸಮಾಚಾರ' ಪಾಕ್ಷಿಕವನ್ನು ಆರಂಭಿಸಿದರು.
ಮಂಗಳೂರ ಸಮಾಚಾರ’ ಪತ್ರಿಕೆಯ ಸಂಪಾದಕರಾಗಿದ್ದ ಮೊಗ್ಲಿಂಗ್ ಕನ್ನಡ ಪತ್ರಿಕೋದ್ಯಮದ ಪಿತಾಮಹ ಎಂದೇ ಖ್ಯಾತಿ ಪಡೆದವರು. ಸ್ವಿಜರ್‌ಲ್ಯಾಂಡ್‌ನ ಬಾಸೆಲ್‌ನಿಂದ ೧೮೩೪ರಲ್ಲಿ ಭಾರತಕ್ಕೆ ಬಂದ ಮಿಶನರಿಗಳು ಇಲ್ಲಿ ಕೈಗಾರಿಕೆ, ವಿದ್ಯಾಸಂಸ್ಥೆ, ಮುದ್ರಣಾಲಯಗಳನ್ನು ಸ್ಥಾಪಿಸಿದ್ದವು. ೧೮೪೧ರಲ್ಲಿ ಮಂಗಳೂರಿನಲ್ಲಿ ಬಾಸೆಲ್ ಮಿಷನರಿ ಮುದ್ರಣಾಲಯ ತೆರೆದು ಕನ್ನಡ ಮತ್ತು ತುಳುವಿನಲ್ಲಿ ಮುದ್ರಣ ಕಾರ್ಯ ಪ್ರಾರಂಭಿಸಿದವು. ಮೊಗ್ಲಿಂಗ್ ೧೮೪೩ರಲ್ಲಿ ವಾರ ಪತ್ರಿಕೆಯೊಂದನ್ನು ಆರಂಭಿಸಿ ಇಲ್ಲಿನ ಜನರಲ್ಲಿ ಓದುವ ಅಭಿರುಚಿ ಮೂಡಿಸುವ ಪ್ರಯತ್ನ ಮಾಡಿದರೂ ನಿರೀಕ್ಷಿತ ಫಲ ದೊರೆಯಲಿಲ್ಲ. ಕ್ರೈಸ್ತ ಮತ ಪ್ರಚಾರಕ್ಕಾಗಿ ಇಲ್ಲಿಗೆ ಬಂದ ಪಾಶ್ಚಾತ್ಯರು ಮೊದಲು ಇಲ್ಲಿ ಕಲ್ಲಚ್ಚಿನ ಮುದ್ರಣವನ್ನು ಆರಂಭಿಸಿ, ತದನಂತರ ಅಚ್ಚುಮೊಳೆಗಳ ಮುದ್ರಣವನ್ನು ತೆರೆದರು. ಪ್ರತಿ ಹದಿನೈದು ದಿನಗಳಿಗೊಮ್ಮೆ, ಪ್ರತಿ ತಿಂಗಳ ಮೊದಲ ಮತ್ತು ೧೫ ರಂದು ಮಂಗಳೂರ ಸಮಾಚಾರ' ಪ್ರಕಟವಾಗುತ್ತಿತ್ತು. ಪ್ರಕಟಣೆಯನ್ನು ೧೮೪೪ರಲ್ಲಿ ನಿಲ್ಲಿಸಲಾಯಿತು ಮತ್ತು ೧೬ನೇ ಮತ್ತು ಕೊನೆಯ ಸಂಚಿಕೆಯನ್ನು ಫೆ.೧೫, ೧೮೪೪ ರಂದು ಪ್ರಕಟಿಗೊಂಡಿತು. ಕಾಗದ ಎಂದು ಜನಪ್ರಿಯವಾಗಿ ಕರೆಯಲ್ಪಡುವ
ಮಂಗಳೂರ ಸಮಾಚಾರ’ದ ಮೊದಲ ಸಂಚಿಕೆ ಜುಲೈ ೧, ೧೮೪೩ರಂದು ಪ್ರಕಟವಾಯಿತು. ಇದರ ಎಲ್ಲಾ ೧೬ ಸಂಚಿಕೆಗಳನ್ನು ಮಂಗಳೂರಿನ ಇವಾಂಜೆಲಿಕಲ್ ಮಿಷನ್‌ಗೆ ಸೇರಿದ ಬಾಸೆಲ್ ಮಿಷನ್ ಲಿಥೋ ಪ್ರೆಸ್‌ನಿಂದ ಮುದ್ರಿತವಾಗುತ್ತಿತ್ತು. ನಂತರ ಅದೇ ಪತ್ರಿಕೆಯು ಬಳ್ಳಾರಿಯಿಂದ ಮಾ.೧, ೧೮೪೪ರಿಂದ ತನ್ನ ಪ್ರಕಟಣೆಯನ್ನು ಪ್ರಾರಂಭಿಸಿತು ಮತ್ತು ಜನವರಿ ೧೮೪೫ರಲ್ಲಿ ನಿಲ್ಲುವವರೆಗೂ ಕನ್ನಡ ಸಮಾಚಾರ ಎಂದು ಕರೆಯಲ್ಪಟ್ಟಿತು.
ಮಂಗಳೂರು ಸಮಾಚಾರಕ್ಕೆ ಒಂದು ಪೈಸೆ ಬೆಲೆ ಇತ್ತು. ಪತ್ರಿಕೆಯು ಕೊತ್ವಾಲರ ಕಟ್ಟೆಯ ಎದುರುಗಡೆ ಇರುವ ಯಜಮಾನ ಅಪ್ಪಣ್ಣನವರ ಮನೆಯಲ್ಲಿ ಮಾರಾಟಕ್ಕೆ ಲಭ್ಯವಿತ್ತಂತೆ.
ಪ್ರತಿಯೊಂದು ಸಂಚಿಕೆಯು ಪಂಚತಂತ್ರದ ನೈತಿಕ ಕಥೆಯನ್ನು ಒಳಗೊಂಡಿತ್ತು. ಮಂಗಳೂರು ಸಮಾಚಾರ ಸತ್ಯವನ್ನು ಮಾತ್ರ ಪ್ರಕಟಿಸಬೇಕು ಮತ್ತು ಅದರಲ್ಲಿ ರಾಜಿ ಮಾಡಿಕೊಳ್ಳದೆ ಸಮಾಜದ ಎಲ್ಲಾ ವರ್ಗಗಳ ಅಗತ್ಯಗಳನ್ನು ಪೂರೈಸಬೇಕು ಎಂದು ಮೊಗ್ಲಿಂಗ್ ನಂಬಿದ್ದರು. ಅಗ್ಗದ ಮನರಂಜನೆ ನೀಡಬಾರದು ಎನ್ನುತ್ತಿದ್ದರಂತೆ.
ಮಂಗಳೂರು, ಮೈಸೂರು, ತುಮಕೂರು, ಬಳ್ಳಾರಿ, ಶಿವಮೊಗ್ಗ, ಹುಬ್ಬಳ್ಳಿ, ಸಿರ್ಸಿ ಮತ್ತು ಹೊನ್ನಾವರದ ಓದುಗರು ಪತ್ರಿಕೆಗೆ ಚಂದಾದಾರರಾಗಿದ್ದರು. ಸಿಪಾಯಿ ದಂಗೆಯ ನಂತರ ಮೊಗ್ಲಿಂಗ್ ೧೮೫೭ ರಲ್ಲಿ ಪಾಕ್ಷಿಕ ಕನ್ನಡ ಸುವಾರ್ತಿಕವನ್ನು ಹೊರತಂದರು. ಇದು ಎರಡು ವರ್ಷಗಳ ಕಾಲ ನಡೆಯಿತು.
ಕನ್ನಡ ನಾಡಿನ ಮೊದಲು ಮುದ್ರಿತ ಪತ್ರಿಕೆ ಮಂಗಳೂರಿನಲ್ಲಿ ಹುಟ್ಟು ಪಡೆಯುವ ಮೂಲಕ ಕನ್ನಡ ಪಾಕ್ಷಿಕ ಪತ್ರಿಕೆಯಿಂದ ಕನ್ನಡ ಪತ್ರಿಕೋದ್ಯಮ ಚರಿತ್ರೆ ಆರಂಭವಾಗಿರುವುದು ಹೆಮ್ಮೆಯ ವಿಚಾರ. ಇಂದು ಕನ್ನಡ ಪತ್ರಿಕೋದ್ಯಮ ಆಗಾಧವಾಗಿ ಬೆಳೆದಿದೆ. ಸಾವಿರಾರು ಮಂದಿ ಕನ್ನಡ ಪತ್ರಿಕೋದ್ಯಮದಲ್ಲಿ ತೊಡಗಿದ್ದಾರೆ. ಇಂದು ಕರುನಾಡಿನಲ್ಲಿ ಕನ್ನಡ ಪತ್ರಿಕೆಗಳು ಅತ್ಯಂತ ಪ್ರಭಾವಿಶಾಲಿಯಾಗಿದೆ. ಇಂದಿನ ನವ ಮಾಧ್ಯಮಗಳ ಅಬ್ಬರದ ನಡುವೆಯೂ ಜನತೆ ನೈಜ, ನಿಖರ, ನಂಬಲಾರ್ಹ ಸುದ್ದಿ, ಮಾಹಿತಿಗಳಿಗೆ ನೆಚ್ಚಿ ಕೊಂಡಿರುವುದು ಪತ್ರಿಕೆಯನ್ನು. ಪೈಪೋಟಿ, ಸವಾಲುಗಳ ನಡುವೆಯೂ ಕನ್ನಡ ಪತ್ರಿಕೋದ್ಯಮ ಇಂದಿಗೂ ತನ್ನ ಮಹತ್ವವನ್ನು ಕಳೆದುಕೊಂಡಿಲ್ಲ. ಇದಕ್ಕೆಲ್ಲಾ ಅಡಿಪಾಯ ಹಾಕಿರುವುದು ಮಂಗಳೂರ ಸಮಾಚಾರ' ಮಂಗಳೂರಿನ ಬಲ್ಮಠದಲ್ಲಿರುವ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಆವರಣದಲ್ಲಿ ಹರ್ಮನ್ ಮೊಗ್ಲಿಂಗ್ ಪ್ರತಿಮೆಯನ್ನು ಸ್ಥಾಪಿಸಿ ಅವರಿಗೆ ಗೌರವ ಅರ್ಪಿಸಲಾಗಿದೆ. ಜು. ೧ರಂದು ಮೊಗ್ಲಿಂಗ್‌ರನ್ನು ಸ್ಮರಿಸಲಾಗುತ್ತಿದೆ.
ಮಂಗಳೂರ ಸಮಾಚಾರ’ದ ಪ್ರತಿಯೂ ಇಲ್ಲಿ ಲಭ್ಯವಿದೆ.