ಔಷಧಿ ಇದ್ರು, ಔಷಧಿ ಕೊಡ್ತಿಲ್ಲ: ಡಿಎಚ್‌ಒ, ಜಿಲ್ಲಾ ಸರ್ಜನ್‌ಗೆ ಡಾ.ನಾಗಲಕ್ಷ್ಮೀ ಚೌಧರಿ ತರಾಟೆ

0
28

ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ

ದಾವಣಗೆರೆ: ಔಷಧಿ ಇದೆ, ಔಷಧಿ ಕೊಡ್ತಿಲ್ಲ. ವೈದ್ಯರು ಬರೆದ ಔಷಧಿ ಬೇರೆ, ಅವರು ಕೊಡುವ ಔಷಧಿ ಬೇರೆ. ಔಷಧಿ ಇದ್ದರೂ ಖಾಗಿ ಆಗಿದೆ ಎಂದು ವೈದ್ಯರು ಬರೆದ ಚೀಟಿ ವಾಪಸ್ ಕೊಡ್ತಾರೆ. ಇವು ನನ್ನ ಕಣ್ಮುಂದೆನೇ ನಡೆದಿದೆ. ಈ ಬಗ್ಗೆ ನೀವು ಏನು ಕ್ರಮ ಜರುಗಿಸಿದ್ದೀರಿ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಡಿಎಚ್‌ಒ, ಜಿಲ್ಲಾ ಸರ್ಜನ್ ಅವರನ್ನು ಪ್ರಶ್ನಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಚಿಗಟೇರಿ ಜಿಲ್ಲಾಸ್ಪತ್ರೆಗೆ ಮಂಗಳವಾರ ಭೇಟಿ ನೀಡಿದ ವೇಳೆ ಬರೀ ಸಮಸ್ಯೆಗಳೇ ಕಣ್ಣು ಮುಂದೆ ಬಂದವು. ಔಷಧಿ ವಿತರಣಾ ಸ್ಥಳದಲ್ಲಿ
ಫಾರ್ಮಸಿಸ್ ಇದ್ದರೂ ತರಬೇತಿ ಫಾರ್ಮಸಿಸ್ ಔಷಧಿ ಕೊಡ್ತಾರೆ, ವೈದ್ಯರು ಬರೆದ ಔಷಧಿ ಬಿಟ್ಟು ಬೇರೆ ಔಷಧಿ ಕೊಟ್ಟರೆ ಇದಕ್ಕೆ ಯಾರು ಜವಾಬ್ದಾರಿ ಎಂದು ಜಿಲ್ಲಾ ಸರ್ಜನ್ ಮತ್ತು ಡಿಎಚ್‌ಒ ಅವರನ್ನು ತರಾಟೆಗೆ ತೆಗೆದುಕೊಂಡರು.

ಗುತ್ತಿಗೆ ನೌಕರರಿಗೆ ೬, ೮ ಸಾವಿರ ವೇತನ: ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ನೌಕರರಿಗೆ ಸರ್ಕಾರ ೧೮ ಸಾವಿರ ವೇತನ ನಿಗದಿ ಮಾಡಿದೆ. ಆದರೆ ಜಿಲ್ಲಾಸ್ಪತ್ರೆಯ ನೌಕರರಿಗೆ ೬, ೮ ಸಾವಿರ ವೇತನ ಕೊಡುತ್ತಿದ್ದಾರೆ ಎಂದು ಕೆಲ ನೌಕರರು ಭೇಟನಾಗಲಕ್ಷ್ಮೀತಮ್ಮ ಸಮಸ್ಯೆ ಬಿಚ್ಚಿಟ್ಟರು. ಈ ಬಗ್ಗೆ ಏಜೆನ್ಸಿ ಮೇಲೆ ಕ್ರಮ ಜರುಗಿಸಿದ್ದೀರಿ ಎಂದು ಪ್ರಶ್ನಿಸಿದರು. ನಮ್ಮಲ್ಲಿ ಇಂಥ ಘಟನೆಗಳು ನಡೆದಿಲ್ಲ ಎಂದು ಜಿಲ್ಲಾ ಸರ್ಜನ್ ಸಮಾಜಾಯಿಸಿ ನೀಡಿದರು. ಈ ವಿಷಯದ ಬಗ್ಗೆ ಕಾರ್ಮಿಕ ಇಲಾಖೆ ಏನು ಕ್ರಮ ತೆಗೆದುಕೊಂಡಿದೆ ಪ್ರಶ್ನಿಸಿದರು. ಅಧಿಕಾರಿ ಸಮರ್ಪಕ ನೀಡದಿದ್ದಾಗ ಬಡತನ ನಿಮ್ಮೆಲ್ಲರನ್ನು ಸುಟ್ಟು ಹಾಕುತ್ತದೆ ಎಂದು ಅಧ್ಯಕ್ಷರು ಖಾರವಾಗಿಯೇ ಹೇಳಿದರು.

ಜಿಲ್ಲಾಸ್ಪತ್ರೆಯಲ್ಲಿ ನೆಲತೊಟ್ಟಿಯಲ್ಲಿ ಪಾಚಿ ಕಟ್ಟಿ, ಹಳದಿ ನೀರು, ಜರಿ, ಹಲ್ಲಿ, ಹುಳುಗಳು ಇವೆ. ನೀವು ಏನು ಮಾಡುತ್ತಿದ್ದೀರಿ. ಜಿಲ್ಲಾಸ್ಪತ್ರೆಯಲ್ಲಿ ಕೆಲವು ಲೋಪದೋಷ ಆಗಿವೆ. ಮುಂದಿನ ದಿನಗಳಲ್ಲಿ ಸರಿಪಡಿಸುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು. ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲೂ ಇದೇ ಸಮಸ್ಯೆಗಳು ಇರಬಹುದು. ಈ ಬಗ್ಗೆ ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡು ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕೆಂದು ತಾಕೀತು ಮಾಡಿದರು.

ಕನಿಷ್ಠ ಸೌಲಭ್ಯಗಳಿಲ್ಲದಿದ್ದರೆ ಜನರ ಬದುಕು ಹೇಗೆ?: ಜಗಳೂರು ತಾಲೂಕಿನ ಗೊಲ್ಲಹಳ್ಳಿಗೆ ಬುಧವಾರ ಭೇಟಿ ನೀಡಿದ ವೇಳೆ ಜನರಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕೊಟ್ಟಿಲ್ಲ. ರಸ್ತೆ ಇಲ್ಲ, ನೀರು ಇಲ್ಲ, ಬಸ್ ಸೌಲಭ್ಯ ಇಲ್ಲ. ಕನಿಷ್ಠ ಮೂಲಭೂತ ಸೌಲಭ್ಯ ಇಲ್ಲದಿದ್ದರೆ ಅಲ್ಲಿನ ಜನ ಹೇಗೆ ಬದುಕಬೇಕು. ಬಸ್ ಇಲ್ಲದೆ ಶಾಲಾ ಮಕ್ಕಳ ಗತಿ ಏನು. ಅವರಿಗೆ ಏನಾದರೂ ತೊಂದರೆಯಾದರೆ ಯಾರು ಜವಾಬ್ದಾರರು. ಕೂಡಲೇ ನಾಳೆ ಆ ಗ್ರಾಮಕ್ಕೆ ಬಸ್ ಬಿಡಿಸಬೇಕೆಂದು ರಸ್ತೆ ಸಾರಿಗೆ ನಿಗಮದ ಅಧಿಕಾರಿಗೆ ಸೂಚನೆ ನೀಡಿದರು.

‘ತೆರೆದ ಮನೆ’ ಕರ‍್ಯಕ್ರಮದ ಅರಿವು ಇಲ್ಲ: ‘ತೆರೆದ ಮನೆ’ ಕರ‍್ಯಕ್ರಮದ ಅರಿವು ಇಲ್ಲದಿರುವುದಕ್ಕೆ ಈಚೆಗೆ ದಾವಣಗೆರೆಯಲ್ಲಿ ಮಹಿಳಾ ಮೇಲೆ ಹಲ್ಲೆ ನಡೆದಿದೆ. ಮಹಿಳೆಯರ ಸುರಕ್ಷತೆ ಬಗ್ಗೆ ಏನೇನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಎಸ್ಪಿ ಅವರನ್ನು ಪ್ರಶ್ನಿಸಿದರು.
ಲೈಂಗಿಕ ದೌರ್ಜನ್ಯ, ಕೌಟುಂಬಿಕ ಕಲಹ ಸೇರಿದಂತೆ ಮಹಿಳೆಯರ ನಡೆಯುವ ಮೇಲೆ ದೌರ್ಜನ್ಯಗಳ ಬಗ್ಗೆ ಸಾಕಷ್ಟು ಅರಿವು ಮೂಡಿಸಲಾಗುತ್ತಿದೆ. ಜಿಲ್ಲೆಯ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಕರಾಟೆ ಸೇರಿದಂತೆ ಸ್ವಯಂ ರಕ್ಷಣೆ ಬಗ್ಗೆ ಮಾಡಿಕೊಳ್ಳಬಹುದಾದ ಕೌಶಲ್ಯಗಳನ್ನು ಕಲಿಸಲಾಗುತ್ತಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದರು.

ಸರ್ಕಾರಿ ಶಾಲೆಗಳಿಗೆ ಮಾತ್ರ ಸೀಮಿತಗೊಳಿಸದೇ ಮುಂದಿನ ದಿನಗಳಲ್ಲಿ ಖಾಸಗಿ ಶಾಲಾ-ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಡಾ.ನಾಗಲಕ್ಷ್ಮೀ ಚೌಧರಿ ಎಸ್ಪಿಗೆ ಸೂಚನೆ ನೀಡಿದರು. ಸಭೆಯಲ್ಲಿ ಪ್ರಭಾರಿ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್, ಅಪರ ಜಿಲ್ಲಾಧಿಕಾರಿ ಲೋಕೇಶ್, ಪಾಲಿಕೆ ಆಯುಕ್ತೆ ರೇಣುಕಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಅಕ್ರಮ ಮದ್ಯಕ್ಕೆ ಕಡಿವಾಣ ಹಾಕಿ: ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಸಣ್ಣ ಅಂಗಡಿಗಳಲ್ಲಿ ಮದ್ಯ ಸಿಗುತ್ತದೆ ಎಂದರೆ ಅಬಕಾರಿ ಮತ್ತು ಪೊಲೀಸ್ ಇಲಾಖೆ ನಿರ್ಲಕ್ಷö್ಯವೇ ಕಾರಣವಾಗಿದೆ. ನಾನು ಭೇಟಿ ನೀಡಿದ ಗ್ರಾಮಗಳಲ್ಲಿ ಬಹುತೇಕ ಹೆಣ್ಣು ಮಕ್ಕಳು ಈ ಬಗ್ಗೆ ದೂರು ನೀಡಿದ್ದಾರೆ. ನೀವು ಕಡಿವಾಣ ಹಾಕಿದಿದ್ದರೆ ಭವಿಷ್ಯ ಸಣ್ಣ ಮಕ್ಕಳು ಮದ್ಯ ಸೇವಿಸಿ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಬಗ್ಗೆ ಗಂಭೀರವಾಗಿ ಕ್ರಮ ತೆಗೆದುಕೊಳ್ಳಬೇಕೆಂದು ಡಾ.ನಾಗಲಕ್ಷ ಚೌಧರಿ ಜಿಲ್ಲಾಡಳಿತಕ್ಕೆ ತಾಕೀತು ಮಾಡಿದರು.

Previous articleಸಾವಿನಲ್ಲೂ ಒಂದಾದ ಸಹೋದರರು
Next articleತಾಯಿ ಆಸೆಯಂತೆ ಕೆಂಬಾಲು ಗ್ರಾಮದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿಸಿದ ನಟ ಪ್ರಭುದೇವ