ಹುಬ್ಬಳ್ಳಿ: ಮುಡಾ ಹಾಗೂ ವಾಲ್ಕೀಕಿ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡಿದ್ದಾರೆ. ಈ ಎರಡರಲ್ಲಿ ಅಕ್ರಮ ಹಣ ತಮಗೆ ಮುಟ್ಟಿಲ್ಲ ಎಂದು ಸಾಬೀತು ಪಡಿಸಬೇಕಾದರೆ ಕಾಂಗ್ರೆಸ್ ಹೈಕಮಾಂಡ್ ತಕ್ಷಣವೇ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಒತ್ತಾಯ ಮಾಡಿದರು.
ನಗರದಲ್ಲಿ ಭಾನುವಾರ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ಅಕ್ರಮ ಮಾಡಿರುವ ಬಗ್ಗೆ ದಾಖಲೆ ಇವೆ ಆದರೂ ಮುಖ್ಯಮಂತ್ರಿ ಒಪ್ಪಿಕೊಳ್ಳುತ್ತಿಲ್ಲ. ಸಿದ್ದರಾಮಯ್ಯ ಲಜ್ಜೆಗೆಟ್ಟ ಮುಖ್ಯಮಂತ್ರಿ ಎಂದು ಸಚಿವ ಜೋಶಿ ವಾಗ್ದಾಳಿ ನಡೆಸಿದರು.
ಈ ಎರಡು ಅಕ್ರಮಗಳಲ್ಲಿ ಕಾಂಗ್ರೆಸ್ ಹೈಕಮಾಂಡ್‌ಗೆ ಪಾಲು ಸೇರಿದೆ ಎಂದರು. ಈ ಎರಡು ಪ್ರಕರಣಗಳ ತನಿಖೆಯನ್ನು ರಾಜ್ಯ ಸರ್ಕಾರ ಸಿಬಿಐ ಗೆ ವಹಿಸಬೇಕು. ತಪ್ಪು ಮಾಡಿಲ್ಲ ಎಂದಾದರೆ ಸಿಬಿಐ ತನಿಖೆಗೆ ಭಯ ಏಕೆ?. ನ್ಯಾಯಾಂಗ ತನಿಖೆ ಎಂಬುದು ಭ್ರಷ್ಟಾಚಾರ ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ಇರುವ ರಹದಾರಿ ಆಗಿದೆ ಎಂದರು.
ರಾಜ್ಯದಲ್ಲಿ ಪೋಲಿಸ್ ಆಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ಹರಾಜು ಮೂಲಕ ನಡೆಯುತ್ತಿದೆ. ಹೆಚ್ಚು ಬಿಡ್ ಕೂಗಿದವರಿಗೆ ಆಯಾ ಕಟ್ಟಿನ ಸ್ಥಳಕ್ಕೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.