ಎ ಪಾಸಿಟಿವ್ ಬದಲು ಬಿ ಪಾಸಿಟಿವ್ ರಕ್ತ ಪೂರಣ

0
21

ವಾಸುದೇವ ಹೆರಕಲ್ಲ
ವಿಜಯಪುರ: ಹೆರಿಗೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಎ ಪಾಸಿಟಿವ್ ರಕ್ತದ ಬದಲು ಬಿ ಪಾಸಿಟಿವ್ ರಕ್ತ ನೀಡಿ ಆಕೆಯ ಪ್ರಾಣದೊಂದಿಗೆ ಚೆಲ್ಲಾಟ ನಡೆಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ರಕ್ತ ಪೂರಣ ಮಾಡಿದ ಮರುಕ್ಷಣದಲ್ಲಿ ತೀವ್ರ ಅಸ್ವಸ್ಥಗೊಂಡ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಕೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಳೆ. ಜಿಲ್ಲಾಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ಮಹಿಳೆಯ ಮನೆಯವರಿಗೆ ಯಾವುದೇ ಮಾಹಿತಿ ನೀಡದೇ ತೀವ್ರ ರಕ್ತಸ್ರಾವವಾಗುತ್ತಿದೆ ಎಂದು ಜಿಲ್ಲಾಸ್ಪತ್ರೆಯವರೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಹಿಳೆಗೆ ಅವಳಿ-ಜವಳಿ ಮಕ್ಕಳಾಗಿದ್ದು ಸುರಕ್ಷಿತವಾಗಿದ್ದಾರೆ. ಆದರೆ ತಾಯಿಯ ಆರೋಗ್ಯ ಮಾತ್ರ ಗಂಭೀರವಾಗಿದೆ. ಘಟನೆಗೆ ಕಾರಣರಾದ ವೈದ್ಯಾಧಿಕಾರಿಗಳು, ನರ್ಸಿಂಗ್ ಸಿಬ್ಬಂದಿ ಹಾಗೂ ರಕ್ತನಿಧಿಯ ವೈದ್ಯಾಧಿಕಾರಿಗಳನ್ನು ರಕ್ಷಿಸುವ ಪ್ರಯತ್ನ ನಡೆದಿದ್ದು, ರಕ್ತನಿಧಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಡಿ.ದರ್ಜೆಯ ನೌಕರನ ತಲೆಗೆ ಕಟ್ಟುವ ಪ್ರಯತ್ನಗಳು ನಡೆದಿದೆ.
ಕಳೆದ ತಿಂಗಳು ೨೩ರಂದು ಮಧ್ಯಾಹ್ನ ೧೨ಕ್ಕೆ ಬಬಲೇಶ್ವರ ತಾಲೂಕು ದದಾಮಟ್ಟಿಯ ಶಾರದಾ ಮಲ್ಲಿಕಾರ್ಜುನ ದೊಡಮನಿ ಎಂಬ ಮಹಿಳೆ ಹೆರಿಗೆ ನೋವಿನಿಂದಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಳು. ಆಕೆಗೆ ಹೆರಿಗೆಯಾಗಿ ಅವಳಿ ಮಕ್ಕಳಿಗೆ ಜನ್ಮ ನೀಡಿದಳು. ಈ ಹಂತದಲ್ಲಿ ಆಕೆಗೆ ರಕ್ತಪೂರಣ ಮಾಡುವ ಅವಶ್ಯಕತೆ ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯರು ರಕ್ತನಿಧಿಯಿಂದ ಎ ಪಾಸಿಟಿವ್ ರಕ್ತ ತರಲು ಹೇಳಿದ್ದಾರೆ. ಆದರೆ ರಕ್ತನಿಧಿ ಸಿಬ್ಬಂದಿ ಅದರ ಬದಲಾಗಿ ಬಿ ಪಾಸಿಟಿವ್ ನೀಡಿದ್ದು, ರಕ್ತನಿಧಿಯ ವೈದ್ಯಾಧಿಕಾರಿಯೂ ಅದನ್ನು ಪರಿಶೀಲಿಸದೇ ನೀಡಿದ್ದಾರೆ. ಪ್ರಸೂತಿ ತಜ್ಞರು, ನರ್ಸಿಂಗ್ ಸಿಬ್ಬಂದಿ ಸಹ ಬೇರೆ ಗುಂಪಿನ ರಕ್ತವನ್ನು ಪೂರಣ ಮಾಡಿದ್ದಾರೆ.
ಕಳೆದ ೨೦ ದಿನಗಳಿಂದ ಬಿಎಲ್‌ಡಿಇ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ಪ್ರಾಣ ರಕ್ಷಣೆಗೆ ವೈದ್ಯರು ಶತ ಪ್ರಯತ್ನ ನಡೆಸಿದ್ದಾರೆ. ದಿನ ಬಿಟ್ಟು ದಿನ ಡಯಾಲಿಸಿಸ್ ನಡೆದಿದೆ. ಬ್ಲಡ್ ರಿಯಾಕ್ಷನ್‌ನಿಂದಾಗಿ ಕಿಡ್ನಿಗಳಿಗೆ ಧಕ್ಕೆಯಾಗಿದೆ ಎನ್ನಲಾಗಿದೆ.
ಬೇರೆ ಗುಂಪಿನ ರಕ್ತ ಪೂರಣ ಮಾಡಿದರೆ ಮನುಷ್ಯ ಬದುಕುವುದೇ ಕಷ್ಟ. ಒಂದು ಹನಿ ಬೇರೆ ಗುಂಪಿನ ರಕ್ತ ದೇಹ ಪ್ರವೇಶಿಸಿದರೂ ಸಾಕು ರಿಯಾಕ್ಷನ್ ಆಗುತ್ತದೆ. ಕೆಲವೊಮ್ಮೆ ರಕ್ತ ಹೆಪ್ಪುಗಟ್ಟಿ ಹೃದಯಸ್ತಂಭನವಾಗುವ ಸಾಧ್ಯತೆಯೂ ಇದೆ.

Previous articleಸಹಜ ಸ್ಥಿತಿಗೆ ಬ್ಯಾಡಗಿ, ೮೦ ಜನರ ಬಂಧನ
Next articleನೀರಿಗಾಗಿ ನೀರೆಯ ಸೀರೆ ಜಗ್ಗಾಟ