ಚಿತ್ರ: ಫೈರ್ ಫ್ಲೈ
ನಿರ್ದೇಶನ: ವಂಶಿ
ನಿರ್ಮಾಣ: ನಿವೇದಿತಾ ಶಿವರಾಜ್‌ಕುಮಾರ್
ತಾರಾಗಣ: ವಂಶಿ, ಸುಧಾರಾಣಿ, ರಚನಾ, ಶಿವರಾಜ್‌ಕುಮಾರ್, ಅಚ್ಯುತ್ ಕುಮಾರ್, ಮೂಗು ಸುರೇಶ್, ಚಿತ್ಕಲಾ ಬಿರಾದಾರ್, ಶೀತಲ್ ಶೆಟ್ಟಿ ಇತರರು.
ರೇಟಿಂಗ್ಸ್: 3
– ಜಿ.ಆರ್.ಬಿ
ಆತ ವಿವೇಕಾನಂದ. ಎಲ್ಲರೂ ‘ವಿಕ್ಕಿ’ ಎಂದೇ ಸಂಬೋಧಿಸುತ್ತಾರೆ. ಆದರೆ ಸ್ವಲ್ಪ ‘ವಿವೇಕ’ ಕಳೆದುಕೊಂಡಂತೆ ಆಡುವ ‘ವಿಕ್ಕಿ’ಗೆ ನಿದ್ರಾಹೀನತೆ ಇನ್ನಿಲ್ಲದಂತೆ ಕಾಡುತ್ತಿರುತ್ತದೆ. ಅದರಿಂದ ಪಾರಾಗಲು ಆತ ಬೇರೆ ಬೇರೆ ‘ಮಾರ್ಗ’ ಅನುಸರಿಸುತ್ತಿರುತ್ತಾನೆ. ಅವೆಲ್ಲವೂ ನಿಜಕ್ಕೂ ‘ಸರಿದಾರಿ’ಗೆ ತರುತ್ತಾ ಎಂಬುದು ಒಂದು ಭಾಗ.
ಅಪ್ಪ, ಅಮ್ಮ ಮತ್ತು ವಿಕ್ಕಿ. ಆತನ ಒಂದಷ್ಟು ಬಂಧು-ಬಳಗ… ಈ ಪ್ರಪಂಚದಲ್ಲೇ ಮುಳುಗಿಹೋಗಿದ್ದ ವಿವೇಕಾನಂದ, ನಂತರ ಅರೆಪ್ರಜ್ಞಾವಸ್ಥೆಯಲ್ಲೇ ಕಳೆದುಹೋಗಿರುತ್ತಾನೆ. ಹಾಗೆಲ್ಲ ಇದ್ದೋನು ಹಿಂಗ್ಯಾಕಾದ..? ಎಂಬುದೇ ಯಕ್ಷಪ್ರಶ್ನೆ. ಅದಕ್ಕೆ ಉತ್ತರವನ್ನೂ ವಿಕ್ಕಿಯೇ ನೀಡುತ್ತಾನೆ ಎಂಬುದು ಮತ್ತೊಂದು ಭಾಗ..!
ಇದೊಂಥರ ವಿವೇಕಾನಂದನ ಜೀವನದ ಕಥೆ-ವ್ಯಥೆ-ಚಿತ್ರಕಥೆ ಎನ್ನಲು ಅಡ್ಡಿಯಿಲ್ಲ. ಆತನ ಲೈಫೇ ಒಂಥರಾ ಮಾಕ್ಟೇಲ್..! ಸುಮಾರು ವರ್ಷಗಳ ಬಳಿಕ ಅಪ್ಪ-ಅಮ್ಮನನ್ನು ಕಾಣಲು ಬಂದ ವಿಕ್ಕಿ ಬಾಳಿನಲ್ಲಿ ದುರ್ಘಟನೆಯೊಂದು ನಡೆಯುತ್ತದೆ. ಅಲ್ಲಿಂದ ಆತನ ಬಾಳು ಬರೀ ಗೋಳು. ಹಾಗಾದರೆ ಅದಕ್ಕೂ ಮುನ್ನ ಹೇಗಿತ್ತು? ಎಂಬುದಕ್ಕೆ ವಿವೇಕಾನಂದನ ಜೀವನದ ಪುಟಗಳನ್ನು ತಿರುವಿ ಹಾಕಬೇಕು. ಆ ಕೆಲಸವನ್ನು ಆರಂಭದಲ್ಲೇ ಶುರುವಿಟ್ಟುಕೊಳ್ಳುವ ವಿಕ್ಕಿ, ಆತನ ಜೀವನದ ಉಪ್ಪು, ಹುಳಿ, ಖಾರ ಘಟನೆಯನ್ನು ಹೇಳಿಕೊಳ್ಳುತ್ತಾ ಸಾಗುವುದೇ ಸಿನಿಮಾದ ಒಟ್ಟಾರೆ ಸಾರ. ಹಾಗಾದರೆ ವಿಕ್ಕಿ ಬಾಳಿನಲ್ಲಿ ಸಿಹಿ ಘಟನೆಗಳೇ ಇಲ್ಲವೇ… ಎಂದು ಕೇಳುವವರಿಗಾಗಿಯೇ ಕೆಲವೊಂದು ‘ಸ್ವೀಟ್ ಮೆಮೋರೀಸ್’ ಕೂಡ ಹಂಚಿಕೊಳ್ಳುವ ವಿಕ್ಕಿ, ಜೀವನದ ನಾನಾ ಮಜಲುಗಳ ಪರಿಚಯ ಮಾಡಿಸಿ ಮನಸ್ಸು ಹಗುರ ಮಾಡಿಕೊಂಡಾಗ, ಅದನ್ನು ನೋಡಿದವರ ಹೃದಯ ಮಾತ್ರ ತುಸು ಭಾರ..!
ನಟನೆ ಜತೆಗೆ ನಿರ್ದೇಶನವನ್ನೂ ನಿಭಾಯಿಸಿರುವ ವಂಶಿ, ತೆರೆಯ ಮೇಲೆ ಕೊಂಚ ಹೆಚ್ಚೇ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಉಳಿದ ಪಾತ್ರಗಳ (ಶಿವರಾಜ್‌ಕುಮಾರ್ ಸೇರಿದಂತೆ) ದರ್ಶನ ಎಲ್ಲೋ ಒಮ್ಮೊಮ್ಮೆ ಆಗುತ್ತಿರುತ್ತದೆ.