ಉಗ್ರರ ದಾಳಿಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಡಿ

ಹುಬ್ಬಳ್ಳಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರಗಾಮಿಗಳು ನಡೆಸಿದ ದಾಳಿಯನ್ನು ಕೆಲವರು ರಾಜಕಾರಣಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವೆ ರಕ್ಷಾ ನಿಖಿಲ್ ಖಾಡ್ಸೆ ಹೇಳಿದರು.
ಇಲ್ಲಿನ ಲೋಹಿಯಾ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಕ್ರೀಡಾ ಸಂಕೀರ್ಣ ವೀಕ್ಷಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದಾಗಲೂ ಕುಹಕದ ಹೇಳಿಕೆ ಸರಿಯಲ್ಲ ಎಂದರು.
ಭಯೋತ್ಪಾದಕರ ದಾಳಿ ವಿರುದ್ಧ ಇಡೀ ದೇಶ ಒಗ್ಗಟ್ಟಾಗಿರಬೇಕು. ಆದರೆ, ಕೆಲವರು ಇಂತಹ ಘಟನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ೩೭೦ನೇ ವಿಧಿ ರದ್ದುಗೊಳಿಸಿದ ನಂತರ ಅಭಿವೃದ್ಧಿ ಕೆಲಸಗಳು ಪ್ರಾರಂಭಗೊಂಡಿವೆ. ಶಿಕ್ಷಣ, ಆರೋಗ್ಯ, ಕೈಗಾರಿಕೆ, ಪ್ರವಾಸ ಮತ್ತಿತರ ಕ್ಷೇತ್ರಗಳು ಬೆಳೆಯುತ್ತಿವೆ. ಅಲ್ಲಿನ ಜನರು ಹೊಸ ಜೀವನ ಕಂಡುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಭದ್ರತಾ ವೈಫಲ್ಯದಿಂದ ಈ ದಾಳಿ ನಡೆದಿಲ್ಲ ಎಂದು ಸರ್ಮಥಿಸಿಕೊಂಡ ಸಚಿವೆ ರಕ್ಷಾ, ಉಗ್ರಗಾಮಿ ಚಟುವಟಿಕೆಗಳನ್ನು ಹತ್ತಿಕ್ಕಲು ಎಲ್ಲ ರೀತಿಯಿಂದಲೂ ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದರು.
2036ರಲ್ಲಿ ಭಾರತದಲ್ಲಿ ಒಲಿಂಪಿಕ್ಸ್‌ಗೆ ಸಿದ್ಧತೆ
ಭಾರತದಲ್ಲಿ ೨೦೩೬ರಲ್ಲಿ ಒಲಿಂಪಿಕ್ಸ್ ಆಯೋಜಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಶಯಕ್ಕೆ ಅನುಗುಣವಾಗಿ ರಾಷ್ಟ್ರದಲ್ಲಿ ಕ್ರೀಡಾಪಟುಗಳಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಪ್ರತಿ ಮನೆಯಲ್ಲಿ ಕ್ರೀಡಾಪಟುಗಳು ಇರಬೇಕೆಂಬುದು ಪ್ರಧಾನಿ ಅವರ ಆಶಯ ಎಂದು ತಿಳಿಸಿದರು.
ಪ್ರತಿ ರಾಜ್ಯ ತನ್ನಲ್ಲಿನ ಕ್ರೀಡಾಪಟುಗಳಿಗೆ ಅಗತ್ಯ ಪ್ರೋತ್ಸಾಹ ನೀಡಬೇಕು. ಈಗಾಗಲೇ ಕೇಂದ್ರ ಸರ್ಕಾರ ಪ್ರತಿಯೊಬ್ಬ ಕ್ರೀಡಾಪಟುವಿಗೆ ಮಾಸಿಕವಾಗಿ ೫೦ ಸಾವಿರ ರೂ. ಗೌರವಧನ, ಖೇಲೊ ಇಂಡಿಯಾದಡಿ ಇತರ ಕ್ರೀಡಾಪಟುಗಳಿಗೆ ೧೦ ಸಾವಿರ ರೂ. ನೀಡುವ ಜತೆಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ ಎಂದು ವಿವರಿಸಿದರು.
ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಉಪಸ್ಥಿತರಿದ್ದರು.