ಉಕ್ಕಿ ಹರಿದ ಬೆಣ್ಣೆಹಳ್ಳ, ತುಪ್ಪರಿಹಳ್ಳಭಾರಿ ಮಳೆ ಮುನ್ಸೂಚನೆ ಹಿನ್ನೆಲೆ; ನವಲಗುಂದ ತಾಲೂಕಿನಲ್ಲಿ ಶಾಲಾ ಕಾಲೇಜಿಗೆ ರಜೆ ಘೋಷಣೆ

ಹುಬ್ಬಳ್ಳಿ : ಜಿಲ್ಲೆಯಲ್ಲಿ ಕಳೆದ ಎರಡು ದಿ‌ನಗಳಿಂದ ರಭಸದ ಮಳೆ ಸುರಿಯುತ್ತಿದ್ದು, ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದ ನವಲಗುಂದ ತಾಲೂಕಿನಲ್ಲಿ ಬೆಣ್ಣೆ ಹಳ್ಳ, ತುಪ್ಪರಿ ಹಳ್ಳ ಉಕ್ಕಿ ಹರಿಯುತ್ತಿವೆ.
ಹವಾಮಾನ ಮುನ್ಸೂಚನೆ ಹಿನ್ನೆಲೆಯಲ್ಲಿ ಆರೇಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ನವಲಗುಂದ ತಾಲೂಕಿನಲ್ಲಿ ಶಾಲಾ ಕಾಲೇಜಿಗೆ ಗುರುವಾರ ರಜೆ ಘೋಷಣೆ ಮಾಡಲಾಗಿದೆ.
ಇನ್ನೂ ಎರಡ್ಮೂರು ದಿನ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದ್ದು, ಜಿಲ್ಲೆಯ ಜನ ಮುನ್ನೆಚರಿಕೆವಹಿಸಬೇಕು. ಸುರಕ್ಷತೆಗೆ ನಿಗಾವಹಿಸಬೇಕು. ವಿಪತ್ತು ನಿರ್ವಹಣಾ ತಂಡಗಳು ತುರ್ತು ಕ್ರಮ ಕೈಗೊಳ್ಳಲು ಸನ್ನದ್ಧ ಸ್ಥಿತಿಯಲ್ಲಿರಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.
ವಾಣಿಜ್ಯನಗರಿ ಹುಬ್ಬಳ್ಳಿಯಲ್ಲೂ ಕಳೆದ ರಾತ್ರಿ ಮೇಘ ಸ್ಪೋಟವಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ಅವಳಿನಗರ ನಡುವೆ ವಾಹನ ಸಂಚಾರ ಸ್ಥಗಿತವಾಗಿತ್ತು.
ಕುಂದಗೋಳ ತಾಲೂಕಿನ ಗುರುವಿನಹಳ್ಳಿ ಕಬನಿಹಳ್ಳ ಪ್ರವಾಹಕ್ಕೆ ತುತ್ತಾಗಿದೆ. ಎಸ್ಟಿ ಕಾಲೋನಿಯು ಜಲಾವೃತವಾಗಿದೆ. ಅದೇ ರೀತಿ ಇದೇ ತಾಲೂಕಿನ ಬರದ್ವಾಡ, ಯರಗುಪ್ಪಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮನೆಗೆ ಮಳೆ ನೀರು ನುಗ್ಗಿದ್ದು, ತುರ್ತು ಪರಿಹಾರ ಕ್ರಮಕ್ಕೆ ಗ್ರಾಮವಾಸಿಗಳು ಮನವಿ ಮಾಡುತ್ತಿದ್ದಾರೆ.
ನವಲಗುಂದದ ಹುಬ್ಬಳ್ಳಿ – ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ನೀರು ನಿಂತು ಸಂಪರ್ಕ ಕಡಿತವಾಗಿತ್ತು.