ಬೆಳಗಾವಿ: ಈಜಲು ಹೋದ ಮೂವರು ಬಾಲಕರು ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟ ಘಟನೆ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಜಮೀನಿನಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಇಂಗಳಿ ಗ್ರಾಮದ ಪೃಥ್ವಿರಾಜ್ ಕೆರಬಾ( 13), ಅಥರ್ವ ಸೌಂದಲಗೆ (15), ಸಮರ್ಥ ಗಡಕರಿ (13) ಮೃತ ವಿದ್ಯಾರ್ಥಿಗಳು. ಮೂವರು ವಿದ್ಯಾರ್ಥಿಗಳಿಗೂ ಈಜು ಬರುತ್ತಿರಲಿಲ್ಲ. ಮೂವರು ಸೇರಿ ಈಜು ಕಲಿಯಲು ಮನೆಯಿಂದ ಸೈಕಲ್ ತೆಗೆದುಕೊಂಡು ಊರ ಹೊರಗಿರುವ ಕೃಷಿ ಹೊಂಡಕ್ಕೆ ಈಜು ಕಲಿಯಲು ಕೃಷಿ ಹೊಂಡಕ್ಕೆ ಹೋಗಿದ್ದಾರೆ. ಮೂವರು ವಿದ್ಯಾರ್ಥಿಗಳಿಗೆ ಈಜು ಬರದೆ ಇದ್ದ ಕಾರಣಕ್ಕೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಎಂದಿನಂತೆ ಹೊಲದ ಮಾಲೀಕ ಸುತ್ತಾಡುತ್ತಿದ್ದಾಗ ಹೊಂಡದ ಪಕ್ಕದಲ್ಲಿ ಸೈಕಲ್ ಇದ್ದುದನ್ನು ಕಂಡು ಅಕ್ಕಪಕ್ಕ ಹುಡುಕಿದಾಗ ಕೃಷಿ ಹೊಂಡದಲ್ಲಿ ಮೂವರ ಶವ ಪತ್ತೆಯಾಗಿವೆ. ಈ ಕುರಿತು ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























