ಇಡಿ ದಾಳಿ ರಾಜಕೀಯ ಪ್ರೇರಿತವಲ್ಲ

ದಾವಣಗೆರೆ: ಇಡಿ ದಾಳಿಯು ರಾಜಕೀಯ ಪ್ರೇರಿತವಲ್ಲ. ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿರುವುದಕ್ಕೆ ಇಡಿ ದಾಳಿ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ಹಗರಣಗಳಲ್ಲಿ ಸರ್ಕಾರ ಭಾಗಿಯಾಗಿದೆ. ಶೇ. ೬೦ರಷ್ಟು ಕಮಿಷನ್ ಬಗ್ಗೆ ಗುತ್ತಿಗೆದಾರರೇ ಆರೋಪಿಸಿದ್ದಾರೆ. ಹೀಗಾದರೆ ಅವರು ಹಗರಣವನ್ನು ಸಮರ್ಥಿಸಿಕೊಳ್ಳುತ್ತಾರೆಯೇ? ಎಂದು ‘ಇಡಿ ದಾಳಿಯು ರಾಜಕೀಯ ಪ್ರೇರಿತ’ ಎಂಬ ಕಾಂಗ್ರೆಸ್ ಶಾಸಕರ ಆರೋಪವಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.
ಸರ್ಕಾರ ಕ್ಷಮೆ ಕೇಳಲಿ:
ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಆಕಸ್ಮಿಕ ಘಟನೆಯಲ್ಲ, ಇದು ಕಾಂಗ್ರೆಸ್ ರಾಜ್ಯ ಸರ್ಕಾರದ ಕ್ರಿಮಿನಲ್ ನೆಗ್ಲೆಜೆನ್ಸಿಯಿಂದ ಈ ದುರಂತ ನಡೆದು ೧೧ ಜನ ಬಲಿಯಾಗಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರವೇ ತಪ್ಪೊಪ್ಪಿಕೊಂಡು ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರದಿಂದ ವಿಧಾನಸೌಧದ ಮೆಟ್ಟಿಲು ಮೇಲೆ ಮಾತ್ರ ಸಂಭ್ರಮಾಚರಣೆ ಆಯೋಜಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಆಗಿದ್ದರೆ, ನೀವು ವಿಧಾನಸೌಧದ ಮೆಟ್ಟಿಲಿಗೆ ಮಾತ್ರ ಮುಖ್ಯಮಂತ್ರಿನಾ? ನೀವು ಹಾಗೆಯೇ ಹೇಳಿದರೆ, ನಿಮ್ಮನ್ನು ಆ ಮೆಟ್ಟಿಲಲ್ಲೇ ಕೂರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಆತುರದ ಬದಲು ಸರ್ಕಾರಕ್ಕೆ ಸಂಯಮ ಇದ್ದಿದ್ದರೆ, ಈ ದುರಂತ ನಡೆಯುತ್ತಿರಲಿಲ್ಲ. ಈ ದುರಂತ ನಡೆದ ಮೇಲೂ ದೋಸೆ ತಿನ್ನೋದು, ಕಪ್‌ಗೆ ಮುತ್ತು ನೀಡೋದು ಸೌಜನ್ಯವಾ? ಎಂದು ಪ್ರಶ್ನಿಸಿದರು.
ಆರ್‌ಸಿಬಿಯ ಸಂಭ್ರಮೋತ್ಸವ ಆಯೋಜಿಸುವ ಅವಶ್ಯಕತೆನೇ ಇರಲಿಲ್ಲ. ಮುಂಚೆ ಮಲ್ಯ ಮಾಲೀಕರಾಗಿದ್ದರು, ಆಗ ಕನ್ನಡಿಗರು ಅನ್ನಬಹುದಿತ್ತು. ಈಗ ಮಾಲೀಕರು ಸಹ ಕರ್ನಾಟಕದವರಲ್ಲ. ಕ್ರಿಕೆಟ್ ಪಟು ಮಯಾಂಕ್ ಅಗರವಾಲ್ ಬಿಟ್ಟರೆ ಯಾರೂ ಸಹ ಕನ್ನಡಿಗರಲ್ಲ. ಆರ್‌ಸಿಬಿ ತಂಡವು ರಾಜ್ಯ ಅಥವಾ ರಾಷ್ಟ್ರವನ್ನು ಪ್ರತಿನಿಧಿಸಿರಲಿಲ್ಲ. ಕ್ರಿಕೆಟ್ ಪ್ಯಾಪುಲಾರಿಟಿ ಪಡೆಯಲು ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮ ಇದು ಎಂದು ದೂರಿದರು.

ಬಿಜೆಪಿ ಟ್ವೀಟ್ ಕೂಡ ಆತುರ..!
ಆರ್‌ಸಿಬಿ ಸಂಭ್ರಮಾಚರಣೆಗೆ ಅವಕಾಶ ನೀಡುವಂತೆ ಬಿಜೆಪಿ ಟ್ವೀಟ್ ಮಾಡಿದ್ದು ಸಹ ಆತುರದ ನಿರ್ಧಾರ. ಈ ವಿಚಾರದಲ್ಲಿ ಬಿಜೆಪಿ ಕೂಡ ತಪ್ಪು ಮಾಡಿದೆ. ‘ನಾನು ಎರಡನೇ ತಾರೀಖು ಅಭಿಮಾನದ ಅತಿರೇಕಕ್ಕೆ ಹೋಗಬೇಡಿ ಅಂದಿದ್ದೆ. ಅಂದು ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ಟೀಕಿಸಿದ್ದರು. ಕಾಲ್ತುಳಿತ ದುರಂತದ ಬಳಿಕ ಸಿ.ಟಿ. ರವಿ ಹೇಳಿದ್ದು ಸರಿ ಇದೆ ಎಂದರು’ ಎಂದು ಸಿ.ಟಿ. ರವಿ ತಿಳಿಸಿದರು.