ಆಲಮಟ್ಟಿ-ತುಂಗಭದ್ರಾ ಜಲಾಶಯಕ್ಕೆ ಬಿಗಿಭದ್ರತೆ

ಆಲಮಟ್ಟಿ: ದೇಶದಲ್ಲಿ ಯುದ್ಧ ಭೀತಿಯ ಹಿನ್ನೆಲೆಯಲ್ಲಿ ಜಲಾಶಯಗಳು ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ರಾಜ್ಯ ಸರ್ಕಾರ ಭದ್ರತೆಯನ್ನು ಹೆಚ್ಚಿಸಿದೆ. ಈ ಸಂಬಂಧ ಗೃಹ ಮಂತ್ರಿ ಡಾ. ಜಿ. ಪರಮೇಶ್ವರ ಅವರು ಆದೇಶ ಹೊರಡಿಸಿದ್ದಾರೆ.
ರಾಜ್ಯದ ಪ್ರಮುಖವಾದ ಆಲಮಟ್ಟಿ ಜಲಾಶಯ ರಾಜ್ಯ ಕೈಗಾರಿಕಾ ಭದ್ರತಾಪಡೆ ಅಧಿಕಾರಿಗಳ ಅಧೀನದಲ್ಲಿ ಬಿಗಿ ಭದ್ರತೆಯ ವ್ಯವಸ್ಥೆಯಲ್ಲಿದೆ. ಆಲಮಟ್ಟಿ ಜಲಾಶಯದ ಸುತ್ತಲೂ ನಾಲ್ಕು ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ. ಉದ್ಯಾನವನಗಳ ವೀಕ್ಷಣೆಗೆ ಬರುವ ಪ್ರವಾಸಿಗರ ವಾಹನಗಳನ್ನು ಕಟ್ಟುನಿಟ್ಟಿನ ತಪಾಸಣೆ ಮಾಡಿ ಕಳಿಸಲಾಗುತ್ತಿದೆ.
ಭದ್ರತಾ ಪಡೆಯ ಒಟ್ಟು 14 ಪಾಯಿಂಟ್‌ಗಳಲ್ಲಿ ಅತ್ಯಾಧುನಿಕ ಆಯುಧಗಳೊಂದಿಗೆ ಕಣ್ಗಾವಲು ಇರಿಸಲಾಗಿದೆ ಎಂದು ಆಣೆಕಟ್ಟು ಭದ್ರತಾ ಉಸ್ತುವಾರಿ ವಹಿಸಿಕೊಂಡಿರುವ ಇನ್ಸ್‌ಪೆಕ್ಟರ್ ಶಿವಲಿಂಗ ಕುರೆಣ್ಣವರ ತಿಳಿಸಿದ್ದಾರೆ.
ಬೋಟ್ ಪ್ಯಾಟ್ರೋಲಿಂಗ್‌ಗೆ ಒಬ್ಬ ಎಎಸ್‌ಐ ನಿಯೋಜನೆ ಮಾಡಲಾಗಿದೆ. ಜಲಾಶಯದ ಭದ್ರತೆಗೆ ಒಬ್ಬ ಅಸಿಸ್ಟೆಂಟ್ ಕಮಾಂಡೆಂಟ್ ಡಿವೈಎಸ್‌ಪಿ, ಇಬ್ಬರು ಇನ್ಸಪೆಕ್ಟರ್, ಒಬ್ಬ ಪಿಎಸ್‌ಐ, 17 ಜನ ಎಎಸ್‌ಐ, 62‌ ಜನ ಪೊಲೀಸರು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ತುಂಗಭದ್ರಾ ಜಲಾಶಯಕ್ಕೂ ಕಣ್ಗಾವಲು:
ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೂ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದೆ. ಭದ್ರತೆಯ ಉಸ್ತುವಾರಿಯನ್ನು ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ವಹಿಸಿಕೊಂಡಿದೆ. ಜಲಾಶಯ ವೀಕ್ಷಣೆಗೆ ಆಗಮಿಸುವ ಪ್ರತಿಯೊಬ್ಬರನ್ನು ಭದ್ರತಾ ಸಿಬ್ಬಂದಿ ತಪಾಸಣೆ ಮಾಡಿ ಒಳಬಿಡುತ್ತಿದ್ದಾರೆ. ಭದ್ರತೆಗೆ ಡಿವೈಎಸ್ಪಿ, ಇನ್ಸಪೆಕ್ಟರ್, 6 ಜನ ಎಎಐಗಳ, 17 ಜನ ಮುಖ್ಯಪೇದೆ, 12 ಪೇದೆ, ಓರ್ವ ಮಹಿಳಾ ಪೇದೆ ಸೇರಿ 39 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.