Home ತಾಜಾ ಸುದ್ದಿ ಅವಾಚ್ಯ ಪದ ಬಳಕೆ ಪ್ರಕರಣ: ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ

ಅವಾಚ್ಯ ಪದ ಬಳಕೆ ಪ್ರಕರಣ: ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ

0

ದಾವಣಗೆರೆ: ಬೆಳಗಾವಿ ವಿಧಾನ ಪರಿಷತ್ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವಾಚ್ಯ ಪದ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾದ ಸತ್ಯಾಸತ್ಯತೆ ಪರಿಶೀಲಿಸಿ, ಅದರ ಆಧಾರದ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೌನ್ಸಿಲ್ ಟಿವಿ, ಸಿಸಿಟಿವಿ ಕ್ಯಾಮೆರಾ ಹಾಗೂ ಆಡಿಯೋ ಮಾತ್ರ ನಮಗೆ ಅಧಿಕೃತ. ಆದರೆ, ಸಿ.ಟಿ. ರವಿ ಅವಾಚ್ಯ ಪದ ಬಳಸಿರುವುದು ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗಿದೆ ಎನ್ನುತ್ತಿದ್ದಾರೆ. ಆ ಆಡಿಯೋ ಎಫ್‌ಎಸ್‌ಎಲ್‌ಗೆ ಕಳುಹಿಸುವಂತೆ ಸೂಚಿಸಿದ್ದೆ. ಆದರೆ, ಈಗ ಯಾರೋ ಒಬ್ಬರೂ ಸಭಾಪತಿಗಳೇ ಕೌನ್ಸಿಲ್‌ಗೆ ಟಿವಿ ಅವರನ್ನು ಬಿಟ್ಟಿದ್ದರಲ್ಲ. ಟಿವಿಯಲ್ಲಿ ಬಂದಿರುವುದು ತಪ್ಪೇನು ಅಂತಾ ಕೇಳುತ್ತಿದ್ದಾರೆ. ಅದು ತಪ್ಪಲ್ಲ, ಆದರೆ, ಅದರ ಸತ್ಯಾಸತ್ಯತೆ ಪರಿಶೀಲಿಸಿ ನೋಡಬೇಕೆಂದರು.
ನಾನು ಡಿ. ೧೯ರವರೆಗೆ ಎಲ್ಲಾ ದಾಖಲೆ ಪರಿಶೀಲಿಸಿ ನನ್ನ ತೀರ್ಮಾನ ನೀಡಿದ್ದೇನೆ. ಈ ವಿಚಾರ ಬೆಳೆಸುವುದು ಬೇಡ ಎಂದಿದ್ದೇನೆ. ಆದರೆ, ಅದನ್ನು ಬೆಳೆಸುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ದೂರು ನೀಡಿದ್ದಾರೆ. ಮೊದಲು ಕೊಟ್ಟಿರುವ ದೂರು ಪರಿಶೀಲಿಸಿ ಪೊಲೀಸರಿಗೆ ಕಳಿಸಿದ್ದೇವೆ. ಈಗ ಸಿ.ಟಿ. ರವಿ ಏಳು ಪುಟದ ದೂರು ಕೊಟ್ಟಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ದೂರು ನೀಡಿದ ಬಳಿಕ ಎರಡೂ ದೂರುಗಳ ಅನ್ವಯ ಕೌನ್ಸಿಲ್ ನಿಯಮದ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವಾಚ್ಯ ಪದ ಬಳಕೆ ವಿಚಾರ ಸರ್ಕಾರ ಸಿಬಿಐಗೆ ವಹಿಸುತ್ತದೆಯೋ ಅಥವಾ ಇನ್ನಾವುದಕ್ಕೆ ವಹಿಸುತ್ತದೆಯೋ ಅದು ನನಗೆ ಸಂಬಂಧಪಟ್ಟ ವಿಷಯವಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

Exit mobile version