ದಾವಣಗೆರೆ: ಅಪ್ರಾಪ್ತ ಬಾಲಕಿ ಅಪಹರಿಸಿ ಬಲವಂತವಾಗಿ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-೧ ನ್ಯಾಯಾಲಯ ೨೦ ವರ್ಷ ಕಾರಾಗೃಹ ಶಿಕ್ಷೆ, ೩೫ ಸಾವಿರ ದಂಡ, ಆತನಿಗೆ ಸಹಕರಿಸಿದ ಆರೋಪಿಗೆ ೨ ವರ್ಷ ಕಾರಾಗೃಹ ಶಿಕ್ಷೆ ಮತ್ತು ೫ ಸಾವಿರ ದಂಡ ವಿಧಿಸಿ ತೀರ್ಪು ನೀಡಿ ಆದೇಶ ಹೊರಡಿಸಿದೆ.
ಎ೧-ಆರೋಪಿ ತಿಮೋತಿ(೨೨), ಆತನಿಗೆ ಸಹಕರಿಸಿದ ಎ೨-ಆರೋಪಿ ರೋಜಿ ಆಲಿಯಾಸ್ ರೋಜಾ ಶಿಕ್ಷೆಗೊಳಗಾದವರು. ೨೦೨೩ರಲ್ಲಿ ೧೩ ವರ್ಷ ಅಪ್ರಾಪ್ತ ವಯಸ್ಸಿನ ಬಾಲಕಿ ಶಾಲೆಗೆ ರಜೆ ನೀಡಿದ್ದರಿಂದ ಅಜ್ಜಿ ಮನೆಗೆ ಬಂದಿದ್ದಳು. ೨೦೨೩ರ ಏಪ್ರಿಲ್ ೨೪ರಂದು ಬೆಳಗ್ಗೆ ೮ ಗಂಟೆಗೆ ಅಜ್ಜಿ ಅಡುಗೆ ಕೆಲಸಕ್ಕೆಂದು ಮನೆಯಿಂದ ಹೊರಗಡೆ ಹೋಗಿದ್ದರು. ಅಡುಗೆ ಕೆಲಸ ಮುಗಿಸಿಕೊಂಡು ಸಂಜೆ ವಾಪಸ್ ಮನೆಗೆ ಬಂದು ನೋಡಿದಾಗ ಬಾಲಕಿ ಮನೆಯಲ್ಲಿ ಇರಲಿಲ್ಲ. ಗಾಬರಿಯಿಂದ ಅಜ್ಜಿ ಮಗಳಿಗೆ ಈ ವಿಷಯ ತಿಳಿಸಿದ್ದಾರೆ. ಕೂಡಲೇ ಬಾಲಕಿ ತಾಯಿ ಮಗಳನ್ನು ಎಲ್ಲ ಕಡೆ ಹುಡುಕಿದರೂ ಪತ್ತೆಯಾಗಿಲ್ಲ ಎಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪಿಎಸ್‌ಐ ಎಂ.ಆರ್. ಚೌಬೆ, ತನಿಖೆ ನಡೆಸಿ ಆರೋಪಿಗಳಾದ ತಿಮೋತಿ ಮತ್ತು ರೋಜಿ ಆಲಿಯಾಸ್ ರೋಜಾ ವಿರುದ್ಧ ದೋಷಾರೋಪಣಾ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದರು.
ಏ. ೧೫ರಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-೧ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ವಿಚಾರಣೆ ನಡೆಸಿದ್ದು, ಆರೋಪ ಸಾಬೀತಾಗಿದ್ದರಿಂದ ತಿಮೋತಿ ಎ೧-ಆರೋಪಿಗೆ ೨೦ ವರ್ಷ ಕಾರಾಗೃಹ ಶಿಕ್ಷೆ, ೩೫ ಸಾವಿರ ದಂಡ ಹಾಗೂ ರೋಜಿ ಆಲಿಯಾಸ್ ರೋಜಾ ಆರೋಪಿ-೨ ಇವರಿಗೆ ೨ ವರ್ಷ ಕಾರಾಗೃಹ ಶಿಕ್ಷೆ ಹಾಗೂ ೫ ಸಾವಿರ ದಂಡ ವಿಧಿಸಿದೆ. ಆರೋಪಿಗಳು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದು, ಬಂಧನದ ಅವಧಿ ಪರಿಗಣಿಸಿ ಶಿಕ್ಷಾ ಅವಧಿಯನ್ನು ಸೆಟ್ ಆಫ್ ಮಾಡಲಾಗಿದೆ. ಆರೋಪಿತರಿಂದ ವಸೂಲು ಮಾಡಿದ ದಂಡದ ಒಟ್ಟು ಮೊತ್ತ ೪೦ ಸಾವಿರ ರೂ. ಪ್ರಕರಣದ ಸಂತ್ರಸ್ಥೆಗೆ ನೀಡುವಂತೆ ಹಾಗೂ ಸಂತ್ರಸ್ಥೆಗೆ ಸರ್ಕಾರದಿಂದ ೫ ಲಕ್ಷ ರೂ. ಪರಿಹಾರ ನೀಡುವಂತೆ ತೀರ್ಪು ನೀಡಿದೆ. ಪಿರ್ಯಾದಿ ಪರವಾಗಿ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್ ನ್ಯಾಯ ಮಂಡನೆ ಮಾಡಿದ್ದಾರೆ.