ಸಂ. ಕ. ಸಮಾಚಾರ, ಮಂಗಳೂರು: ಪಾಕಿಸ್ತಾನದ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್ ಯಶಸ್ವಿ ದಾಳಿ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಲಾಯಿತು.
ಸೈನಿಕರಿಗೆ ಶಕ್ತಿ ತುಂಬಲು ಜಿಲ್ಲೆಯಾದ್ಯಂತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ದೇವರನ್ನು ಪ್ರಾರ್ಥಿಸಲಾಯಿತು. ಪಕ್ಷ ಬೇಧ, ಜಾತಿ, ಧರ್ಮ ಮರೆತು ಬಿಜೆಪಿ, ಕಾಂಗ್ರೆಸ್ ಹಾಗೂ ಸಾರ್ವಜನಿಕರು, ಸಂಘ ಸಂಸ್ಥೆಗಳು ಸೇನೆಯ ಕಾರ್ಯಾಚರಣೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಸೇನೆಯ ಕಾರ್ಯಾಚರಣೆಯನ್ನು ಬೆಂಬಲಿಸಿ ರಾಜಕೀಯ ನಾಯಕರುಗಳಿಂದ ಹೇಳಿಕೆಗಳ ಮಹಾಪೂರವೇ ಹರಿದು ಬಂದಿದೆ.
ಸ್ಥೈರ್ಯ ತುಂಬಬೇಕು..
ಪಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ದಾಳಿ ಮಾಡಿದ ಉಗ್ರರಿಗೆ ಭಾರತೀಯ ಸೇನೆ ಸರಿಯಾದ ಉತ್ತರವನ್ನೇ ನೀಡಿದೆ. ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ ಪುಡಿಗೈದಿದೆ. ಉಗ್ರರ ಮೇಲೆ ದಾಳಿ ಮಾಡಿರುವ ಸೈನಿಕರಿಗೆ ಮತ್ತಷ್ಟು ಸ್ಥೈರ್ಯ ತುಂಬಬೇಕಿದೆ ಎಂಬ ಮಾತು ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಚರ್ಚ್, ಮಸೀದಿಗಳಲ್ಲಿ ಪ್ರಾರ್ಥನೆಗಳಾಗಲಿ..
ಪಹಲ್ಗಾಮ್ ನಲ್ಲಿ ಮಹಿಳೆಯರ ಮುಂದೆಯೇ ಅವರ ಸಿಂಧೂರವನ್ನು ಅಳಿಸುವ ಕೆಲಸ ಮಾಡಲಾಗಿತ್ತು. ನಾಗರಿಕರ ಮೇಲೆ ಅಮಾನುಷವಾಗಿ ದಾಳಿ ಮಾಡಿ ಕೊಲ್ಲಲಾಗಿತ್ತು. ಕೇಂದ್ರ ಸರಕಾರ ಇದೀಗ ಉಗ್ರರಿಗೆ ಸೂಕ್ತ ಉತ್ತರ ನೀಡಿದೆ. ಮಹಿಳೆಯರ ಸಿಂದೂರ ಅಳಿಸಿದ ಉಗ್ರರಿಗೆ ತಕ್ಕ ಪಾಠ ಕಲಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಉಗ್ರರ ಮಟ್ಟ ಹಾಕಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಜಿಹಾದಿ ಉಗ್ರರ ಮೇಲೆ ಇನ್ನಷ್ಟು ದಾಳಿಗಳು ನಡೆಯಬೇಕು. ಸೈನಿಕರಿಗೆ ಇನ್ನಷ್ಟು ಬಲ ನೀಡಬೇಕೆಂದು ಈ ಪ್ರಾರ್ಥನೆ ನೆರವೇರಿಸಲಾಗಿದೆ. ಪ್ರತೀ ಮಂದಿರ,ಮಠ, ಚರ್ಚ್ ಮತ್ತು ಮಸೀದಿಗಳಲ್ಲಿ ಇಂಥ ಪ್ರಾರ್ಥನೆಗಳು ನಡೆಯಬೇಕು ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.
