ಅಪಘಾತದ ಸೋಗಿನಲ್ಲಿ ಕೊಲೆ: ಮೂವರ ಬಂಧನ

0
28

ಬೆಳಗಾವಿ: ರಾಮದುರ್ಗ ತಾಲೂಕಿನ ಕಟಕೋಳ ಠಾಣೆ ವ್ಯಾಪ್ತಿಯಲ್ಲಿ ಫೆ. ೨೫ರ ರಾತ್ರಿ ನಡೆದ ಸಣ್ಣರಾಮಪ್ಪ ಪತ್ತಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಕಟಕೋಳದ ಶಂಕರ ಜಾಧವ, ಚಿಕ್ಕೋಡಿಯ ಸುಲ್ತಾನ್ ಕಿಲ್ಲೇದಾರ, ರಾಹುಲ ಬಾಗೇವಾಡಿ ಮತ್ತು ನಿಪ್ಪಾಣಿ ಟಿಪ್ಪು ಮುಜಾವರ ಬಂಧಿತರು. ಸಣ್ಣರಾಮಪ್ಪ ಪತ್ತಾರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಆರಂಭದಲ್ಲಿ ತಿಳಿಸಲಾಗಿತ್ತು. ಆದರೆ, ಪೊಲೀಸರು ಪರಿಶೀಲಿಸಿದಾಗ, ಅದು ಅಪಘಾತ ಅಲ್ಲ ಎಂಬುದು ಸಂಶಯ ಬಂದಿತ್ತು. ಇದು ಅಪಘಾತವಲ್ಲ ಎಂದು ಕುಟುಂಬಸ್ಥರೂ ಸಂಶಯ ವ್ಯಕ್ತಪಡಿಸಿದ್ದರು. ಮರಣೋತ್ತರ ಪರೀಕ್ಷಾ ವರದಿಯಲ್ಲೂ ಕೊಲೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಎಲ್ಲ ಆಯಾಮಗಳಲ್ಲಿ ತನಿಖೆ ಕೈಗೊಂಡಾಗ ಕೊಲೆ ಮಾಡಿರುವುದು ತಿಳಿದುಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.
ಮಹಾರಾಷ್ಟ್ರದಲ್ಲಿ ನೆಲೆಸಿರುವ ಘಾಟಗೆ ಅವರಿಗೆ ಸೇರಿದ ೭ ಎಕರೆ, ೨ ಗುಂಟೆ ಕೃಷಿಭೂಮಿ ಕಟಕೋಳದಲ್ಲಿ ಇತ್ತು. ಶಂಕರ ಜಾಧವ ಅದನು ಉಳುಮೆ ಮಾಡುತ್ತಿದ್ದರು. ಉಳುವವನೇ ಭೂಮಿ ಒಡೆಯ ಯೋಜನೆಯಡಿ ಅದನ್ನು ಪಡೆಯಲು ಪ್ರಯತ್ನಿಸಿದ್ದರು. ಆದರೆ, ನ್ಯಾಯಾಲಯದಲ್ಲಿ ಘಾಟಗೆ ಪರವಾಗಿ ತೀರ್ಪು ಬಂದಿತ್ತು. ಈ ಮಧ್ಯೆ, ಸಣ್ಣರಾಮಪ್ಪ ಪತ್ತಾರ ಈ ಭೂಮಿ ಉಳುಮೆ ಮಾಡುತ್ತಿದ್ದರು. ಈ ವಿಷಯವಾಗಿ ಶಂಕರ ಮತ್ತು ಸಣ್ಣರಾಮಪ್ಪ ಮಧ್ಯೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದರು.
ಸಣ್ಣರಾಮಪ್ಪ ಹತ್ಯೆ ಮಾಡಲು ಶಂಕರ ಎಂಬಾತ, ಸುಲ್ತಾನ್ ಕಿಲ್ಲೇದಾರ ಮತ್ತು ಆತನ ಗೆಳೆಯರಿಗೆ ೨.೫ ಲಕ್ಷ ಸುಪಾರಿ ಕೊಟ್ಟಿದ್ದ. ಈಗಾಗಲೇ ೧.೫ ಲಕ್ಷ ಹಣ ಕೊಟ್ಟಿದ್ದ. ಈ ಹಿಂದೆ ನಾಲೈದು ಬಾರಿ ಸಣ್ಣರಾಮಪ್ಪ ಕೊಲೆಗೆ ಪ್ರಯತ್ನ ನಡೆದಿತ್ತು ಎಂದು ತಿಳಿಸಿದರು.

Previous articleಕಾಯಕ-ದಾಸೋಹ ಪರಿಕಲ್ಪನೆಯಲ್ಲಿ ಕಾರ್ಯಕ್ರಮ
Next articleಸುಳ್ಯದಲ್ಲಿ ದಾಖಲೆಯ ಬಿಸಿಲು