ಅನುಕಂಪದ ಆಧಾರದ ಮೇಲೆ ನೇಮಕ…

ಅನುಭವಿಗಳು, ಸಾಧನೆ ಮಾಡಿರುವವರು ಸ್ಥಾನವನ್ನು ಅಲಂಕರಿಸಬೇಕು

ಬೆಂಗಳೂರು: ಶೈಕ್ಷಣಿಕ ಅರ್ಹತೆಯನ್ನು ಸರ್ಕಾರ ಕೂಡಲೇ ಪರಿಶೀಲಿಸಿ ಅರ್ಹತೆ ಇಲ್ಲದವರಿಗೆ ಗೇಟ್ ಪಾಸ್ ನೀಡಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಕರ್ನಾಟಕ ಲೋಕ ಸೇವಾ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಮೇಲ್ವಿಚಾರಣೆ, ಸಮರ್ಥ ನಿರ್ವಹಣೆ , ಆಡಳಿತ ಮಾಡಲು ವಿಷಯ ತಜ್ಞರು, ಉತ್ತಮ ವಿದ್ಯಾರ್ಹತೆ ಇರುವಂತವರು, ಅನುಭವಿಗಳು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರು – ಕಾರ್ಯದರ್ಶಿ, ವಿಶೇಷಾಧಿಕಾರಿಗಳ ಸ್ಥಾನವನ್ನು ಅಲಂಕರಿಸಬೇಕು.

ಆದರೆ, ವಾಸ್ತವದಲ್ಲಿ 7 ನೇ ಕ್ಲಾಸು ನಪಾಸಾದವರು, ಅನುಕಂಪದ ಆಧಾರದ ಮೇರೆಗೆ ಕೆಲಸ ಗಿಟ್ಟಿಸಿಕೊಂಡವರೇ ಹೆಚ್ಚಾಗಿದ್ದರೆ. ಪ್ರಸ್ತುತ 288 ಹುದ್ದೆಗಳಲ್ಲಿ 180 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಇದರಲ್ಲಿ 50 % ನಷ್ಟು ಸಿಬ್ಬಂದಿ ಅನುಕಂಪದ ಆಧಾರದ ಮೇಲೆ ನೇಮಕವಾಗಿ, ಸರಿಯಾದ ಶಿಕ್ಷಣ ಇಲ್ಲದೆ ಇರುವುದರಿಂದ ಆಯೋಗದ ಕಾರ್ಯನಿರ್ವಹಣೆಯ ಮೇಲೆ ಪ್ರಭಾವ ಬೀರಿದೆ.

ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುವ ಗಂಭೀರವಾದ ಜವಾಬ್ದಾರಿಯನ್ನು ಹೊತ್ತಿರುವ ಆಯೋಗದಲ್ಲಿ ಉತ್ತರದಾಯಿತ್ವವೇ ಇಲ್ಲ. ಸಿಬ್ಬಂದಿ ಕೆಲಸ ಮಾಡುವ ಬದಲಿಗೆ ಕ್ಯಾಂಟೀನ್‌ನಲ್ಲೆ ಹೆಚ್ಚು ಸಮಯ ಕಳೆಯುವುದು ಕಂಡು ಬಂದಿದೆ. ಇವರಿಗಿರುವ ಕನಿಷ್ಠ ವಿದ್ಯಾರ್ಹತೆಯಿಂದ ಆಯೋಗದ ಉತ್ಪಾದಕತೆಯ ಮೇಲೂ ಪ್ರಭಾವ ಬೀರಿ ಪದೇ ಪದೇ ತಪ್ಪುಗಳು, ದೋಷಗಳು ಆಗುತ್ತಿದೆ.

ಕಾರ್ಯದರ್ಶಿ, ವಿಶೇಷಾಧಿಕಾರಿ, ಪರೀಕ್ಷಾ ನಿಯಂತ್ರಕ ಸಿಬ್ಬಂದಿ ಸೇರಿದಂತೆ ಆಯೋಗದ ಪ್ರಮುಖ ಇಲಾಖೆಗಳಲ್ಲಿ ವಿಷಯ ತಜ್ಞರನ್ನು, ಅನುಭವಿಗಳನ್ನು ಸರ್ಕಾರ ನೇಮಿಸಬೇಕು. ಅನುಕಂಪದ ಹುದ್ದೆಯಲ್ಲಿರುವ ಶೈಕ್ಷಣಿಕ ಅರ್ಹತೆಯನ್ನು ಸರ್ಕಾರ ಕೂಡಲೇ ಪರಿಶೀಲಿಸಿ ಅರ್ಹತೆ ಇಲ್ಲದವರಿಗೆ ಗೇಟ್ ಪಾಸ್ ನೀಡಲಿ ಎಂದು ಆಗ್ರಹಿಸಿದ್ದಾರೆ.