Home ತಾಜಾ ಸುದ್ದಿ ಹಾಸ್ಯನಟ ಚಿಕ್ಕಣ್ಣಗೆ ವಿಚಾರಣೆ ಬಿಸಿ

ಹಾಸ್ಯನಟ ಚಿಕ್ಕಣ್ಣಗೆ ವಿಚಾರಣೆ ಬಿಸಿ

0

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಯನಟ ಚಿಕ್ಕಣ್ಣಗೆ ಮತ್ತೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ.
ನಟ ದರ್ಶನ್ ಸೇರಿ ಕೊಲೆ ಆರೋಪಿಗಳ ವಿರುದ್ಧ ಚಿಕ್ಕಣ್ಣ ೧೬೪ ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದರು. ಆದರೆ ಇದಾದ ಕೆಲವೇ ದಿನಗಳಲ್ಲಿ ನಟ ದರ್ಶನ್ ಭೇಟಿಯಾಗಲು ಜೈಲಿಗೆ ತೆರಳಿದ್ದ ನಟ ಚಿಕ್ಕಣ್ಣನಿಗೆ ಆ.೨೮ ರಂದು ರಾತ್ರಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಗುರುವಾರ ಬೆಳಗ್ಗೆ ೯ ಗಂಟೆಗೆ ವಿಜಯನಗರ ಎಸಿಬಿ ಚಂದನ್ ಅವರ ಕಚೇರಿಗೆ ಹಾಜರಾದ ಚಿಕ್ಕಣ್ಣ, ದರ್ಶನ್ ನೋಡಲು ಜೈಲಿಗೆ ಹೋಗಿದ್ದರ ಬಗ್ಗೆ ತನಿಖಾಧಿಕಾರಿಗಳ ಮುಂದೆ ಉತ್ತರ ನೀಡಿದ್ದಾರೆ. ಕೊಲೆ ಆರೋಪಿಗಳ ವಿರುದ್ಧ ೧೬೪ ಅಡಿಯಲ್ಲಿ ಹೇಳಿಕೆ ಕೊಟ್ಟ ಮೇಲೆ ಆರೋಪಿಗಳನ್ನು ಭೇಟಿಯಾಗಬಾರದು ಎಂದು ಗೊತ್ತಿರಲಿಲ್ಲ. ನಾನು ಮಾನವೀಯತೆ ದೃಷ್ಟಿಯಿಂದ ದರ್ಶನ್ ಭೇಟಿಯಾಗಲು ಜೈಲಿಗೆ ಹೋಗಿದ್ದೆ ಎಂದಿದ್ದಾರೆ.
ಇನ್ನೂ ವಿಚಾರಣೆ ವೇಳೆ ಚಿಕ್ಕಣ್ಣನಿಗೆ ಎಸಿಬಿ ಚಂದ್ರನ್ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ದರ್ಶನ್ ಭೇಟಿಯ ಉದ್ದೇಶವೇನು? ಆರೋಪಿಗಳನ್ನು ಪದೇ ಪದೇ ಭೇಟಿಯಾಗುವುದರ ಹಿಂದಿನ ರಹಸ್ಯವೇನು? ಎಂಬ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ೧೬೪ ಅಡಿಯಲ್ಲಿ ಹೇಳಿಕೆ ನೀಡಿ ಮತ್ತೆ ನಿಮ್ಮ ಹೇಳಿಕೆ ಬದಲಾಯಿಸಿದ್ರೆ ನಿಮಗೆ ಸಮಸ್ಯೆಯಾಗುತ್ತೆ. ನ್ಯಾಯಾಧೀಶರ ಮುಂದೆ ನೀಡಿದ ಹೇಳಿಕೆ ಬದಲಾಯಿಸಿದ್ರೆ ಕಾನೂನಾತ್ಮಕ ಕ್ರಮ ಕೈಗೊಳ್ಳುವ ಕುರಿತು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಅಲ್ಲದೆ ಜೈಲಿನಲ್ಲಿ ದರ್ಶನ್ ಭೇಟಿಗೆ ಬೆದರಿಕೆ ಅಥವಾ ಆಮಿಷ ಏನಾದ್ರೂ ನೀಡಿದ್ದಾರೆಯೇ ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಚಿಕ್ಕಣ್ಣ, ನನ್ನ ಹೇಳಿಕೆ ಪಡೆದುಕೊಂಡಿರುವ ಬಗ್ಗೆ ದರ್ಶನ್ ಬಳಿ ಹೇಳಿದೆ. ಆಗಾ ದರ್ಶನ್ ಇರಲಿ ಬಿಡು ಎಂದರು, ಎಂದು ಚಿಕ್ಕಣ್ಣ ಹೇಳಿದ್ದಾರೆ. ಇನ್ನೂ ಪೊಲೀಸರು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ನಟ ಚಿಕ್ಕಣ್ಣನಿಗೆ ತಾಕೀತು ಮಾಡಿ ಕಳುಹಿಸಿದ್ದಾರೆ ಎಂದು ಮೂಲಗಳು ಹೇಳಿವೆ.

Exit mobile version