ಬೆಂಗಳೂರು: ಬೆಂಗಳೂರು ನಗರದಿಂದ ಶಿವಮೊಗ್ಗ ಜಿಲ್ಲೆಯ ಸಿಗಂದೂರು ದೇವಾಲಯಕ್ಕೆ, ಸೇತುವೆ ನೋಡಲು ಹೋಗುವ ಭಕ್ತರಿಗೆ ಸಿಹಿಸುದ್ದಿ. ಕೆಎಸ್ಆರ್‌ಟಿಸಿ ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಕೆಎಸ್ಆರ್‌ಟಿಸಿ ಬೆಂಗಳೂರು ಕೇಂದ್ರ ವಿಭಾಗದಿಂದ ಈ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ಬೆಂಗಳೂರು-ಸಿಗಂದೂರು ಬಸ್ ಚಿತ್ರದುರ್ಗ, ಹೊಳಲ್ಕೆರೆ, ಚನ್ನಗಿರಿ, ಶಿವಮೊಗ್ಗ ಮಾರ್ಗವಾಗಿ ಸಂಚಾರವನ್ನು ನಡೆಸಲಿದೆ. ಆಗಸ್ಟ್ 22ರಂದು ಈ ಬಸ್ ಸೇವೆಗೆ ಚಾಲನೆ ನೀಡಲಾಗಿದೆ ಎಂದು ಕೆಎಸ್ಆರ್‌ಟಿಸಿ ಹೇಳಿದೆ.
ವೇಳಾಪಟ್ಟಿ, ದರ: ಬೆಂಗಳೂರು-ಸಿಗಂದೂರು ನಡುವಿನ ನಾನ್ ಎಸಿ ಸ್ಲೀಪರ್ ಬಸ್ ಬೆಂಗಳೂರು ನಗರದಿಂದ 21.40ಕ್ಕೆ ಹೊರಡಲಿದೆ. ಸಿಗಂದೂರು 6 ಗಂಟೆಗೆ ತಲುಪಲಿದೆ. ಸಿಗಂದೂರಿನಿಂದ 20.00 ಗಂಟೆಗೆ ಹೊರಟು, ಬೆಂಗಳೂರು ನಗರಕ್ಕೆ 4.15ಕ್ಕೆ ಆಗಮಿಸಲಿದೆ. ಈ ಬಸ್‌ನ ಪ್ರಯಾಣ ದರ 950 ರೂ.ಗಳು.
ಜನರು ನಾನ್ ಎಸಿ ಸ್ಲೀಪರ್ ಬಸ್ ಸಹಾಯವನ್ನು ಪಡೆದುಕೊಂಡು ಸಂಚಾರ ನಡೆಸಿ ಎಂದು ಕೆಎಸ್ಆರ್‌ಟಿಸಿ ಮನವಿ ಮಾಡಿದೆ. ಮುಂಗಡ ಬುಕ್ಕಿಂಗ್‌ಗಾಗಿ ಕೆಎಸ್ಆರ್‌ಟಿಸಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಸಿಗಂದೂರು ಚೌಡೇಶ್ವರಿ ದೇವಾಲಯಿದೆ. ಈಗ ದೇವಾಲಯಕ್ಕೆ ಹೋಗಲು ಸೇತುವೆಯ ವ್ಯವಸ್ಥೆ ಇದೆ. ಆದ್ದರಿಂದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೂರಾರು ಭಕ್ತರು ತೆರಳುತ್ತಾರೆ.
ಸಿಗಂದೂರು ಬ್ರಿಡ್ಜ್ ಉದ್ಘಾಟನೆಗೊಂಡ ಮೇಲೆ ನೂರಾರು ಪ್ರವಾಸಿಗರು ಸಹ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಸಾಗರ, ಜೋಗ ಜಲಪಾತ, ಸಿಗಂದೂರು, ವರದಹಳ್ಳಿ ಸೇರಿದಂತೆ ತಾಲೂಕಿನಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಆದ್ದರಿಂದ ಬೆಂಗಳೂರು ನಗರದಿಂದ ತೆರಳುವ ಪ್ರವಾಸಿಗರಿಗೆ ಸಹಾಯಕವಾಗಲು ಬಸ್ ವ್ಯವಸ್ಥೆ ಮಾಡಲಾಗಿದೆ.