ಸಾಲಗಾರಳ ಅಪ್ರಾಪ್ತ ಮಗಳನ್ನೇ ಅಪಹರಿಸಿ ಮದುವೆಯಾದ ಯುವಕ

0
31

ಬೆಳಗಾವಿ: ಸಾಲ ಮರುಪಾವತಿ ಮಾಡದಿದ್ದಕ್ಕೆ ಒತ್ತಾಯಪೂರ್ವಕವಾಗಿ ಸಾಲಗಾರಳ ಅಪ್ರಾಪ್ತ ಬಾಲಕಿಯನ್ನೇ ಅಪಹರಿಸಿ ಕೊಂಡೊಯ್ದು ಮದುವೆಯಾದ ಅಮಾನವೀಯ ಘಟನೆ ಬೆಳಗಾವಿ ನಗರದ ಅನಗೋಳದಲ್ಲಿ ನಡೆದಿದೆ.
ವಿಶಾಲ ಢವಳಿ ಎಂಬುವನೇ ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ಯುವಕ. ಬಾಲಕಿಯ ಚಿಕ್ಕಪ್ಪ ಮತ್ತು ತಾಯಿ ಅನಗೋಳದಲ್ಲಿ ವಾಚಮೆನ್ ಕೆಲಸ ಮಾಡುತ್ತಿದ್ದರು. ಬಾಲಕಿಗೆ ಅನಾರೋಗ್ಯ ಹಾಗೂ ಬಾಲಕಿ ಅತ್ತಿಗೆಯ ಹೆರಿಗೆ ಚಿಕಿತ್ಸೆಗಾಗಿ ಕಿವಿ ಓಲೆ ಒತ್ತೆಯಿಟ್ಟು ಬಾಲಕಿಯ ತಾಯಿ ವಿಶಾಲ ಢವಳಿ ಬಳಿ ೫೦ ಸಾವಿರ ರೂ. ಸಾಲ ತೆಗೆದುಕೊಂಡಿದ್ದಳು. ಆದರೆ ಸಾಲ ಮರುಪಾವತಿಸುವಲ್ಲಿ ವಿಳಂಬವಾಗಿದೆ. ಇದೇ ಕಾರಣಕ್ಕೆ ನಿಮ್ಮ ಮಗಳ ಜೊತೆ ಮದುವೆ ಮಾಡಿಕೊಡುವಂತೆ ವಿಶಾಲ ಹಠ ಹಿಡಿದಿದ್ದಾನೆ. ನಂತರ ೨೦೨೪ರ ಸೆ. ೧೮ರಂದು ಬಾಲಕಿ ಮತ್ತು ಅವಳ ತಾಯಿಯನ್ನು ಆಟೋದಲ್ಲಿ ಬಲವಂತವಾಗಿ ಮನೆಗೆ ಕರೆದುಕೊಂಡು ಹೋಗಿ ಮಾರನೇ ದಿನ ಸೆ. ೧೯ರಂದು ಬೆಳಗ್ಗೆ ಬಾಲಕಿ ಜೊತೆ ವಿಶಾಲ ಮದುವೆ ಮಾಡಿಕೊಂಡಿದ್ದಾನೆ.
ಅಲ್ಲದೇ ಬಾಲಕಿಯೂ ಅಪ್ರಾಪ್ತೆಯಾದರೂ ಬಲವಂತವಾಗಿ ಆಕೆಯೊಂದಿಗೆ ವಿಶಾಲ ದೈಹಿಕ ಸಂಪರ್ಕ ಮಾಡಿದ್ದಾನೆಂದು ಬಾಲಕಿ ದೂರಿದ್ದಾಳೆ. ಮದುವೆಯ ನಂತರ ಮನೆಯಲ್ಲಿ ಬಾಲಕಿಯ ಮೇಲೆ ಆತನ ಮನೆಯವರು ಕೂಡಾ ದೌರ್ಜನ್ಯ ನಡೆಸಿ ಪೀಡಿಸಿದ್ದಾಗಿ ದೂರಿನಲ್ಲಿ ಹೇಳಲಾಗಿದೆ.
ಬೆಳಗಾವಿಯ ಟಿಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿಶಾಲ ಢವಳಿ, ಆತನ ತಾಯಿ ರೇಖಾ ಢವಳಿ, ತಂದೆ ಪುಂಡಳಿಕ ಢವಳಿ ಮತ್ತು ಸಹೋದರ ಶ್ಯಾಮ ಢವಳಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ.

Previous articleChampions Trophy 2025: ಭಾರತ ತಂಡ ಪ್ರಕಟ
Next articleಬಾಹ್ಯಾಕಾಶ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿರುವ ಕನ್ನಡಿಗ: ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ