Home ತಾಜಾ ಸುದ್ದಿ ಸಂಸ್ಕೃತಿ, ಕೃಷಿ ಕ್ಷೇತ್ರಕ್ಕೆ ಹವ್ಯಕರ ಕೊಡುಗೆ ಅಪಾರ

ಸಂಸ್ಕೃತಿ, ಕೃಷಿ ಕ್ಷೇತ್ರಕ್ಕೆ ಹವ್ಯಕರ ಕೊಡುಗೆ ಅಪಾರ

0

ಬೆಂಗಳೂರು: ಆಡುಮುಟ್ಟದ ಸೊಪ್ಪಿಲ್ಲ ಹವ್ಯಕರು ಮಾಡದ ಕೆಲಸವಿಲ್ಲ, ಪ್ರತಿಭೆಯ ಇನ್ನೊಂದು ಹೆಸರೇ ಹವ್ಯಕ ಸಮಾಜ, ಪ್ರಪಂಚದ ಯಾವ ಭಾಗದಲ್ಲಿದ್ದರೂ ತಮ್ಮ ಸಂಸ್ಕೃತಿಯನ್ನು ಪೂಜಿಸುವ, ದೇಶದ ಕೃಷಿ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ ಹೀಗೆ ಹಲವು ಮಠಾಧೀಶರು ಹಾಗೂ ಗಣ್ಯರು ನಗರದಲ್ಲಿ ನಡೆದ ಮೂರನೇ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಸಮುದಾಯದ ಕಾರ್ಯವನ್ನು ಗುಣಗಾನ ಮಾಡಿದರು.
ಸಮ್ಮೇಳನವನ್ನು ಉದ್ಘಾಟಿಸಿದ ರಾಘವೇಶ್ವರ ಭಾರತೀ ಸ್ವಾಮೀಜಿ ಮಾತನಾಡಿ, ಹವ್ಯಕ ಸಮುದಾಯ ಸಮುದ್ರವಿದ್ದಂತೆ, ಹವ್ಯಕರು ದೇಶದ ಹಲವೆಡೆಗಳು ಸೇರಿ ವಿದೇಶಗಳಲ್ಲಿ ನೆಲಸಿ ವೃತ್ತಿ ಬದುಕನ್ನು ಕಂಡುಕೊಂಡಿದ್ದಾರೆ. ಹವ್ಯಕರು ನಡೆದು ಬಂದ ದಾರಿಯೇ ವಿಶೇಷತೆಯಿಂದ ಕೂಡಿದೆ. ನಮ್ಮ ಪೂರ್ವಜರು ಹೆಚ್ಚಿನ ಮಟ್ಟದಲ್ಲಿ ಆಚಾರ-ವಿಚಾರಗಳನ್ನು ಪಾಲಿಸಿಕೊಂಡು ಶುದ್ಧತೆ ಕಂಡುಕೊಂಡಿದ್ದರು, ಅದು ಇಂದಿನವರಲ್ಲೂ ಬರಬೇಕಿದೆ ಎಂದು ಸಲಹೆ ನೀಡಿದರು.
ಮಂತ್ರಾಲಯದ ಶ್ರೀರಾಘವೇಂದ್ರ ಮಠದ ಶ್ರೀಸುಬುಧೇಂದ್ರ ತೀರ್ಥರು ಮಾತನಾಡಿ, ರಾಘವೇಶ್ವರ ಸ್ವಾಮೀಜಿ ಅವರು ಧಾರ್ಮಿಕವಾಗಿ ಎಲ್ಲಾ ಜನರನ್ನು ಚೈತನ್ಯವಂತರನ್ನಾಗಿ ಮಾಡುವ ಶ್ರೀಗಳು ಎಂದೇ ತಿಳಿಯಬಹುದು. ರಾಮನ ಆದರ್ಶಗಳನ್ನು ಪುಸ್ತಕ ರೂಪದಲ್ಲಿ ತಂದು ಜನಸಾಮಾನ್ಯರಿಗೆ ತಿಳಿಸುತ್ತಾ, ಗೋಸಂರಕ್ಷಣೆಯಲ್ಲಿ ತೊಡಗಿದ್ದಾರೆ. ಆಡುಮುಟ್ಟದ ಸೊಪ್ಪಿಲ್ಲ ಹವ್ಯಕರು ಮಾಡದ ಕೆಲಸವಿಲ್ಲ ಎಂಬಂತೆ ಹಲವು ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಹವ್ಯಕ ಸಮಾಜ ಶಿಸ್ತುಬದ್ಧತೆಗೆ ಹೆಸರುವಾಸಿಯಾದವರು. ಎಲ್ಲಿಲ್ಲಿ ಪ್ರತಿಭೆಗೆ ಅವಕಾಶವಿದೆ ಅಲ್ಲಿ ಹವ್ಯಕರು ತಮ್ಮದೇ ವಿಶೇಷ ಕೊಡುಗೆ ನೀಡುತ್ತಾ ಸಾಗುತ್ತಿದ್ದಾರೆ. ಕನ್ನಡದ ಹಲವು ಪತ್ರಿಕೆಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸುವ ಮೂಲಕ ಪತ್ರಿಕೋದ್ಯಮ ಕಾರ್ಯಕ್ಷಮತೆಯಲ್ಲಿ ತೊಡಗಿಕೊಂಡಿರುವಿಕೆ ವಿಶೇಷತೆಯಿಂದ ಕೂಡಿದೆ. ದೇಶದ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ ಎಂಬುದು ಗಮನಾರ್ಹ, ಇವರು ಬೆಳೆಯುತ್ತಿರುವ ಅಡಿಕೆ ಬೆಳೆ ಎಲೆ ಅಡಿಕೆಗೆ ಸಿಮೀತವಲ್ಲ ಬದಲಾಗಿ ಅಡಿಕೆ ಹಲವು ತರಹದಲ್ಲಿ ಅನಿವಾರ್ಯವಾಗಿದೆ. ಹವ್ಯಕರು ಉದ್ಯಮಶೀಲರಾಗಿ ಹಲವರಿಗೆ ಉದ್ಯೋಗ ಒದಗಿಸುವಂತಾಗಬೇಕು ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾತನಾಡಿ, ಇಂತಹ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಆಚಾರ ವಿಚಾರಗಳ ವೈವಿಧ್ಯತೆಯನ್ನು ಮೆಲುಕು ಹಾಕುವಂತಾಗಿದೆ. ಹಿಂದುತ್ವಕ್ಕೆ ತಮ್ಮದೇ ಆದ ವಿಶೇಷ ಕೊಡುಗೆ ನೀಡುತ್ತಾ ಬಂದಿದೆ. ಹವ್ಯಕ ಸಮಾಜದ ರಾಮಭಟ್ಟರು ರಾಜಕೀಯವಾಗಿ ಬೆಳೆಯಲು ನನಗೆ ಸಹಕರಿಸಿದವರು ಎಂದು ಹೇಳಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಹವ್ಯಕ ಸಮಾಜ ರಾಷ್ಟ್ರಭಕ್ತಿಗೆ ಪೂರಕವಾಗಿರುವ ಸಮಾಜ. ಪ್ರತಿಭೆಗೆ ಮತ್ತೊಂದು ಹೆಸರು. ಸ್ವಾಭಿಮಾನಿ ಹಾಗೂ ಸೌಹಾರ್ದಯುತ ಮಾದರಿ ಬದುಕಿಗೆ ಹೆಸರಾಗಿದ್ದಾರೆ. ಕೃಷಿಯಲ್ಲಿ ವಿಶೇಷ ಪ್ರಗತಿ ಸಾಧಿಸುತ್ತಾ ಬರುತ್ತಿದ್ದಾರೆ. ಹವ್ಯಕ ಸಮಾಜದ ರಾಮಕೃಷ್ಣ ಹೆಗಡೆ ರಾಜಕೀಯ ಕ್ಷೇತ್ರದಲ್ಲಿ ವಿಶೇಷ ಚಾಪನ್ನು ಮೂಡಿಸಿರುವುದು ಒಂದು ಬಗೆಯ ಇತಿಹಾಸ ಎಂದರು.
೨೦೦೦ ಕಿ.ಮೀ. ದೂರದಿಂದ ಬಂದ ಜ್ಯೋತಿ
ಹವ್ಯಕ ಸಮ್ಮೇಳನದ ಅಂಗವಾಗಿ ಉತ್ತರ ಪ್ರದೇಶದ ಅಹಿಚ್ಛತ್ರದಿಂದ ಜ್ಯೋತಿ ಆಗಮಿಸಿತ್ತು. ಇದು ಸಮ್ಮೇಳನಕ್ಕೆ ಬಂದವರ ಗಮನ ಸೆಳೆಯಿತು. ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಪ್ರಾಚೀನ ಅಹಿಚ್ಛತ್ರದ ಗ್ರಾಮದಲ್ಲಿರುವ ರಾಮದೇವಾಲಯದಿಂದ ‘ಅಹಿಚ್ಛತ್ರ ಜ್ಯೋತಿ’ಗೆ ಚಾಲನೆ ನೀಡಲಾಗಿದ್ದು, ಈ ದೇವಾಲಯದಲ್ಲಿ ಕಳೆದ ೫೦ ವರ್ಷದಿಂದ ಅಖಂಡ ಜ್ಯೋತಿಯು ಬೆಳಗುತ್ತಿರುವುದು ವಿಶೇಷ.

ಮಕ್ಕಳೇ ಬೇಡ ಎನ್ನುವ ತೀರ್ಮಾನ ಸರಿಯಲ್ಲ
ಅಪರೂಪದ ಹವ್ಯಕ ತಳಿಯನ್ನು ಉಳಿಸಬೇಕಾದ ಅವಶ್ಯಕತೆ ಇದೆ. ಮುಂದಿನ ತಲೆಮಾರಿಗೆ ಹವ್ಯಕ ಉಳಿದು, ಸಂಸ್ಕೃತಿಯನ್ನು ಕೊಂಡೊಯ್ಯುವುದಕ್ಕಾಗಿ ಹವ್ಯಕ ದಂಪತಿ ಮೂರು ಮಕ್ಕಳನ್ನು ಪಡೆಯುವುದು ಅಗತ್ಯವಿದೆ. ಮಕ್ಕಳನ್ನು ಹಡೆದು ಸಾಧ್ಯವಾದರೆ ಸಾಕಿ, ಇಲ್ಲದಿದ್ದರೆ ಶ್ರೀರಾಮಚಂದ್ರಪುರ ಮಠಕ್ಕೆ ಅಂತಹ ಮಕ್ಕಳನ್ನು ನೀಡಿರಿ. ಸಾಕಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿ ನಿಮಗೆ ಕೊಡುತ್ತೇವೆ. ಈಗ ದಂಪತಿ ಹೆಚ್ಚು ಮಕ್ಕಳು ಅಥವಾ ಮಕ್ಕಳೇ ಬೇಡ ಎಂಬ ನಿರ್ಧಾರಕ್ಕೆ ಬರುತ್ತಿದ್ದಾರೆ. ಇಂತಹ ಪದ್ಧತಿ ಹಲವು ದೇಶಗಳಲ್ಲಿವೆ. ಅದನ್ನು ನಮ್ಮ ದೇಶದ ಸಂಸ್ಕೃತಿಗೆ ಹೋಲಿಸುವುದು ಬೇಡ. ಈಗ ಹವ್ಯಕರ ಸಂಖ್ಯೆ ಕಡಿಮೆಯಾಗುತ್ತಿದೆ.

  • – ಶ್ರೀರಾಘವೇಶ್ವರಭಾರತೀ ಸ್ವಾಮೀಜಿ, ರಾಮಚಂದ್ರಾಪುರ ಮಠಾಧೀಶರು.

Exit mobile version