Home ತಾಜಾ ಸುದ್ದಿ ಪ್ರಾಣಿ ಬಲಿ ತಡೆ: ಪೊಲೀಸ್ ಸರ್ಪಗಾವಲಿನಲ್ಲಿ ನಡೆದ ಲಕ್ಕವ್ವದೇವಿ ಜಾತ್ರೆ

ಪ್ರಾಣಿ ಬಲಿ ತಡೆ: ಪೊಲೀಸ್ ಸರ್ಪಗಾವಲಿನಲ್ಲಿ ನಡೆದ ಲಕ್ಕವ್ವದೇವಿ ಜಾತ್ರೆ

0

ರಬಕವಿ-ಬನಹಟ್ಟಿ: ಸಮೀಪದ ಆಸಂಗಿ ಗ್ರಾಮದೇವತೆ ಲಕ್ಕವ್ವದೇವಿ ಜಾತ್ರೆಯಂದು ದೇವಾಲಯ ಮುಂಭಾಗದ ಪಾದಗಟ್ಟೆ ಆವರಣದಲ್ಲಿ ಪ್ರಾಣಿ ಬಲಿಯಾಗುವುದನ್ನು ಪೊಲೀಸರು ಶುಕ್ರವಾರ ತಡೆಯುವಲ್ಲಿ ಕಾರಣವಾಯಿತು.
ಪ್ರತಿ ವರ್ಷ ಗ್ರಾಮದ ಹೃದಯ ಭಾಗದಲ್ಲಿ ಲಕ್ಕವ್ವದೇವಿ ಜಾತ್ರೆ ನಡೆಯುತ್ತದೆ. ಪುರಾತನ ಕಾಲದಿಂದಲೂ ದೇವಿಗೆ ಜಾತ್ರೆ ಸಂದರ್ಭದಲ್ಲಿ ಭಕ್ತರು ಹರಕೆ ತೀರಿಸಲು ಪ್ರಾಣಿ ಬಲಿ ನೀಡುವುದನ್ನು ರೂಢಿಸಿಕೊಂಡಿದ್ದಾರೆ.
ಪ್ರತಿ ಸಲ ಜಾತ್ರೆ ನಡೆದಾಗ ಸಾವಿರಾರು ಟಗರು, ಹೋತ, ಕೋಳಿ ಬಲಿ ನೀಡಲಾಗುತ್ತಿತ್ತು. ಜಾತ್ರೆ ಸಂದರ್ಭದಲ್ಲಿ ಪೊಲೀಸರು ಪ್ರಾಣಿ ಬಲಿ ಕಾಯಿದೆಗೆ ವಿರುದ್ಧವೆಂದು ಕಣ್ಣು ತಪ್ಪಿಸಿ ಭಕ್ತರು ತಮ್ಮ ಹರಕೆ ತೀರಿಸುತ್ತಿದ್ದರು.

ಆಗಿದ್ದೇನು?
ಪ್ರತಿ ಸಲ ನಡೆಯುತ್ತಿದ್ದ ಪ್ರಾಣಿ ಬಲಿಗೆ ಒಂದು ಸಮುದಾಯದ ಭವನ ಕಾರಣವಾಗಿದ್ದು, ದಿವಾಣಿ ವ್ಯಾಜ್ಯವಾಗಿರುವ ಪ್ರದೇಶದಲ್ಲಿ ಅಹಿಂಸೆ ಧರ್ಮವಾಗಿರುವ ಕಾರಣ ಪ್ರಾಣಿ ಬಲಿ ನೀಡಬಾರದೆಂದು ತಿಳಿಸಿದ್ದರು. ಕಳೆದೊಂದು ತಿಂಗಳಿಂದ ಧಾರ್ಮಿಕತೆಗೆ ಧಕ್ಕೆ ಬರುವ ನಿಟ್ಟಿನಲ್ಲಿ ಪೊಲೀಸರ ಮಧ್ಯಸ್ಥಿಕೆಯಲ್ಲಿ ಸಂಧಾನಗಳು ನಡೆದರೂ ವಿಫಲಗೊಂಡಿರುವ ಕಾರಣ ಈ ಬಾರಿ ಪೊಲೀಸರ ಹದ್ದಿನ ಕಣ್ಣು ಜಾತ್ರೆಯಲ್ಲಿತ್ತು.

ಪೊಲೀಸ್ ಸರ್ಪಗಾವಲು
ಜಾತ್ರೆಯಲ್ಲಿ 50 ಸಾವಿರಕ್ಕೂ ಅಧಿಕ ಜನರು ಹಾಗೂ ಸಾವಿರಾರು ಟಗರುಗಳನ್ನು ಬಲಿ ನೀಡಲಾಗುತ್ತದೆ ಎಂಬ ಮಾಹಿತಿಯನ್ವಯ ಅಲ್ಲದೆ ಈಗಾಗಲೇ ಗ್ರಾಮದಲ್ಲಿ ಕೊಂಚ ವಿಷಮ ಪರಿಸ್ಥಿತಿ ಎದುರಾಗಿದ್ದರಿಂದ 75ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಜಾತ್ರೆಗೆ ನಿಯೋಜಿಸಿ ದೇವಾಲಯದ ಪಾದಗಟ್ಟೆ ಆವರಣದಲ್ಲಿ ಪ್ರಾಣಿ ಬಲಿ ತಡೆಯಲು ಸಿಸಿ ಕ್ಯಾಮೆರಾ ಅಳವಡಿಕೆಯ ಮೂಲಕ ಪೊಲೀಸ್ ಸರ್ಪಗಾವಲು ರೂಪಿಸಲಾಗಿದೆ.

ಹಿಡಿಶಾಪ
`ದೇವರ ಹರಕೆ ತೀರಿಸಲು 5 ದಿನದಿಂದ ಮೀಸಲು ಹಾಕಿದ್ದ ಹೈನದಲ್ಲಿ ಅನ್ನ ಕಲಿಸಿಕೊಂಡು ಹೊಸ ಮಡಕೆಯೊಳಗೆ ತಂದೀವಿ. ಇಲ್ಲಿ ನೋಡಿದ್ರ ಪೊಲೀಸ್ರು ಒಂದು ಟಗರನ್ನೂ ಗುಡಿಕಡೆ ಬಿಡುತ್ತಿಲ್ಲ. ನಮ್ಮ ಹರಕೆ ಪೂರ್ಣ ಆಗಂಗಿಲ್ಲ. ನಮಗೆ ಕಿರಿಕಿರಿ ಮಾಡುವವರಿಗೆ ಆ ದೇವತೆ ನೋಡಿಕೊಳ್ಳತಾಳೆಂಬ ಹಿಡಿಶಾಪ ಹಾಕುತ್ತಿರುವುದು ಎಲ್ಲ ಕಡೆ ಕೇಳಿ ಬರುತ್ತಿತ್ತು.
ಶುಕ್ರವಾರ ಸಂಜೆವರೆಗೂ ಬಿಗಿ ಬಂದೋಬಸ್ತ್ ಇತ್ತು. ಸಂಜೆ ಹೊತ್ತು ಹರಕೆ ತೀರಿಸುವ ಭಕ್ತರು ತಮ್ಮ ತಮ್ಮ ಮನೆಯೊಳಗೆ ಗುಟ್ಟಾಗಿ ಹರಕೆ ತೀರಿಸಲು ಮುಂದಾದರು.
ಪ್ರಾಣಿ ಬಲಿಯನ್ನು ಹೊರತುಪಡಿಸಿದರೆ ಆಸಂಗಿ ಗ್ರಾಮದ ಲಕ್ಕವ್ವದೇವಿ ಜಾತ್ರ ಅಪ್ಪಟ ಜಾನಪದರ ಹಬ್ಬವಾಗಿತ್ತು. ಸುತ್ತಲಿನ ಹತ್ತಾರು ಹಳ್ಳಿಗಳಿಂದ ಹಾಗೂ ಪಟ್ಟಣಗಳಿಂದ ದೇವಾಲಯದತ್ತ ತೆರಳುತ್ತಿರುವದು ಆಕರ್ಷವಾಗಿತ್ತು. ದೇವಾಲಯ ಆವರಣದಲ್ಲಿ ನೆರೆದಿದ್ದ ಭಕ್ತರು ಭಾವಾವೇಶಗೊಂಡು ಪೂಜೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿದ್ದು ಕಂಡು ಬಂತು.

Exit mobile version