ಪುತ್ತಿಗೆ ಉಭಯ ಶ್ರೀಗಳ ವೈಭವದ ಪುರಪ್ರವೇಶ

0
12

ಉಡುಪಿ: ಜ. 18ರಂದು ನಾಲ್ಕನೆಯ ಬಾರಿಗೆ ಸರ್ವಜ್ಞ ಪೀಠಾರೋಹಣಗೈದು ದ್ವೈವಾರ್ಷಿಕ ಶ್ರೀಕೃಷ್ಣ ಪರ್ಯಾಯ ಸ್ವೀಕರಿಸಲಿರುವ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಪರ್ಯಾಯಪೂರ್ವ ತೀರ್ಥಕ್ಷೇತ್ರ ಪರ್ಯಟನ ಪೂರೈಸಿ ಶಿಷ್ಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರೊಡಗೂಡಿ ಸೋಮವಾರ ಸಂಜೆ ಪುರಪ್ರವೇಶ ಮಾಡಿದರು.
ಕನ್ನರ್ಪಾಡಿ ಶ್ರೀ ಜಯದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡಿದ ಉಭಯ ಶ್ರೀಪಾದರು ತರುವಾಯ ಜೋಡುಕಟ್ಟೆಗೆ ಆಗಮಿಸಿದರು.
ಶ್ರೀಮಠದ ಉಪಾಸ್ಯ ದೇವರಾದ ಶ್ರೀ ರುಕ್ಮಿಣಿ ಸತ್ಯಭಾ ಮಾ ಶ್ರೀಕೃಷ್ಣ ವಿಠಲ ದೇವರಿಗೆ ಪೂಜೆ ಸಲ್ಲಿಸಿದರು.
ಯತಿದ್ವಯರನ್ನು ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಪರ್ಯಾಯ ಸ್ವಾಗತ ಸಮಿತಿಯವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜನಪ್ರತಿನಿಧಿಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸೇರಿದ ಗಣ್ಯರು, ಅಭಿಮಾನಿಗಳು ಸ್ವಾಗತಿಸಿದರು.
ಉಭಯ ಶ್ರೀಪಾದರನ್ನು ಸಾಲಂಕೃತ ಹಂಸ ವಾಹನದಲ್ಲಿ ಕುಳ್ಳಿರಿಸಿ, ಪಲ್ಲಕಿಯಲ್ಲಿ ಮಠದ ಪಟ್ಟದ ದೇವರನ್ನಿಟ್ಟು ಮೆರವಣಿಗೆ ಸಾಗಿತು.
ವೇದ ವಾದ್ಯ ಘೋಷ, ಚೆಂಡೆ ಕಹಳೆ, ಜಾನಪದ ನೃತ್ಯ, ಟ್ಯಾಬ್ಲೊಗಳು, ವಿವಿಧ ಸಮುದಾಯದವರು ಮೆರವಣಿಗೆಯಲ್ಲಿ ಸಾಗಿ ಬಂದರು.
ಮೆರವಣಿಗೆ ಕೋರ್ಟು ರಸ್ತೆ, ಹಳೆ ಡಯಾನ ವೃತ್ತ, ಕೆ.ಎಂ. ಮಾರ್ಗ, ತ್ರಿವೇಣಿ ಸರ್ಕಲ್, ಸಂಸ್ಕೃತ ಕಾಲೇಜು, ಕನಕದಾಸ ಮಾರ್ಗವಾಗಿ ರಥಬೀದಿ ತಲುಪಿತು.
ನಂತರ ನಡಿಗೆಯಲ್ಲಿ ಸಾಗಿಬಂದ. ಉಭಯ ಶ್ರೀಪಾದರು ಕನಕನ ಕಿಂಡಿ ಮೂಲಕ ಶ್ರೀಕೃಷ್ಣ ದರ್ಶನ ಗೈದು, ಶ್ರೀಅನಂತೇಶ್ವರ, ಶ್ರೀಚಂದ್ರಮೌಳೀಶ್ವರ, ಶ್ರೀಕೃಷ್ಣ- ಮುಖ್ಯಪ್ರಾಣದೇವರ ದರ್ಶನಗೈದರು. 6.45ರ ಸುಮುಹೂರ್ತದಲ್ಲಿ ರಥಬೀದಿಯಲ್ಲಿನ ಪುತ್ತಿಗೆ ಮಠ ಪ್ರವೇಶ ಮಾಡಿದರು.
ಸ್ವಾಗತ ಸಮಿತಿ ಅಧ್ಯಕ್ಷ ಡಾ. ಎಚ್.ಎಸ್. ಬಲ್ಲಾಳ್, ಅಧ್ಯಕ್ಷ ರಘುಪತಿ ಭಟ್, ಕಾರ್ಯದರ್ಶಿ ದೇವಿಪ್ರಸಾದ ಶೆಟ್ಟಿ ಬೆಳಪು, ಕೋಶಾಧಿಕಾರಿ ರಂಜನ್ ಕಲ್ಕೂರ, ಮಠದ ದಿವಾನ ನಾಗರಾಜ ಆಚಾರ್ಯ, ಪ್ರಸನ್ನಾಚಾರ್ಯ, ಪ್ರ‌ಮುಖರಾದ ಶಾಸಕ ಯಶಪಾಲ್ ಸುವರ್ಣ, ಪ್ರದೀಪಕುಮಾರ್ ಕಲ್ಕೂರ, ಭುವನಾಭಿರಾಮ ಉಡುಪ, ಶ್ರೀಪತಿ ಭಟ್ ಮೊದಲಾದವರಿದ್ದರು.

Previous articleಬಸವಣ್ಣ, ನಾಡಿನ ಸಾಂಸ್ಕೃತಿಕ ರಾಯಭಾರಿ
Next articleಪಿಎಎಲ್ ವಜಾ: ಪುತ್ತಿಗೆ ಶ್ರೀ ಹರ್ಷ