ಚಿತ್ರದುರ್ಗ: ಚಿತ್ರದುರ್ಗ ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ಕೆ.ಜಿ.ಮೂಡಲಗಿರಿಯಪ್ಪ ಅವರನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ.
ನಿರ್ಮಿತಿ ಕೇಂದ್ರದ ಕೋಟಂತ್ಯರ ರೂ.ಗಳ ಹಣ ದುರ್ಬಳಕೆ ಕುರಿತು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೆ.ಜಿ.ಮೂಡಲಗಿರಿಯಪ್ಪ ವಿರುದ್ದ ನಿರ್ಮಿತಿ ಕೇಂದ್ರದ ಹಾಲಿ ಯೋಜನಾ ನಿರ್ದೇಶಕ ಸತ್ಯನಾರಾಯಣ್ ರಾವ್ ದೂರು ನೀಡಿದ್ದು ಪೊಲೀಸರು ದೂರು ಆಧರಿಸಿ ಮತ್ತೊಂದು ಎಫ್ಐಆರ್ ದಾಖಲು ಮಾಡಿದ ಕೂಡಲೇ ಬಂಧಿಸಿದ್ದಾರೆ. ಚಿತ್ರದುರ್ಗ ಸೈಬರ್ ಕ್ರೈಂ ಪೊಲೀಸರು ಭಾನುವಾರ ತಡರಾತ್ರಿ ಮೂಡಲಗಿರಿಯಪ್ಪ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅವರು ಬೇನಾಮಿ ಚೆಕ್ ಬಳಸಿ 7 ಕೋಟಿ 4 ಲಕ್ಷದ 45 ಸಾವಿರ ರೂ.ಗಳ ಅವ್ಯವಹಾರ ಮಾಡಿದ ಆರೋಪದ ಹಿನ್ನೆಲೆಯಲ್ಲಿ ನಿರ್ಮಿತಿ ಕೇಂದ್ರದ ಹಾಲಿ ಯೋಜನಾ ನಿರ್ದೇಶಕ ಸತ್ಯನಾರಾಯಣ ರಾವ್ ದೂರು ನೀಡಿದ್ದರು. ವಿವಿಧ ಇಲಾಖೆಗಳ, ವಿವಿಧ ಕಾಮಗಾರಿಗಾಗಿ ಬಿಡುಗಡೆ ಆಗಿದ್ದ ಹಣವನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 408, 406, 420, 465, 468 ಅಡಿ ಕೇಸ್ ದಾಖಲಾಗಿದೆ. ಈ ಹಿಂದೆಯೂ ಮೊಳಕಾಲ್ಮೂರು, ಚಳ್ಳಕೆರೆ, ನಾಯಕನಹಟ್ಟಿ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು ಆ ಮೂರು ಪ್ರಕರಣಗಳಲ್ಲಿ ಜಾಮೀನು ಪಡೆದುಕೊಂಡಿದ್ದರು. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಚಿತ್ರದುರ್ಗ ಸೈಬರ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.