ಚಿತ್ರದುರ್ಗ: ಹಲವು ತಿಂಗಳುಗಳಿಂದ ರಾಜ್ಯದ ಗಮನ ಸೆಳೆದಿದ್ದ ಅಪ್ರಾಪ್ತ ಬಾಲಕಿಯರಿಬ್ಬರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರಿಗೆ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯವು ಸ್ವಾಮೀಜಿ ಸೇರಿದಂತೆ ಪ್ರಕರಣದಲ್ಲಿರುವ ಮೂವರು ಆರೋಪಿಗಳೂ ನಿರ್ದೋಷಿಗಳು ಎಂದು ತೀರ್ಪು ನೀಡಿದೆ.
2022ರ ಆಗಸ್ಟ್ 26 ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 3 ವರ್ಷಗಳ ಸುದೀರ್ಘ ತನಿಖೆ ಬಳಿಕ ಚಿತ್ರದುರ್ಗದ 2ನೇ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಲಯದ ನ್ಯಾ.ಗಂಗಾಧರಪ್ಪ ಚನ್ನಬಸಪ್ಪ ಹಡಪದ್ ಅವರಿದ್ದ ಪೀಠ ನಿರ್ದೋಷಿ ಅಂತ ತೀರ್ಪು ಪ್ರಕಟಿಸಿದೆ. ಇದರೊಂದಿಗೆ ಮೊದಲ ಪ್ರಕರಣ ಖುಲಾಸೆಯಾಗಿದೆ.
ಈ ಪ್ರಕರಣದಲ್ಲಿ ಸ್ವಾಮೀಜಿ ಸೇರಿದಂತೆ ಒಟ್ಟು ಐವರು ಆರೋಪಿಗಳಿದ್ದರು. ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ಆರೋಪದಡಿ ಪೋಕ್ಸೊ ಮತ್ತು ಅತ್ಯಾಚಾರ ಕೇಸ್ ದಾಖಲಾಗಿತ್ತು. ಪ್ರಕರಣವು ರಾಜ್ಯದಾದ್ಯಂತ ರಾಜಕೀಯ ಮತ್ತು ಸಾಮಾಜಿಕ ಚರ್ಚೆಗೆ ಗ್ರಾಸವಾಗಿತ್ತು.
ತೀರ್ಪಿನ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ, ಸ್ವಾಮೀಜಿ ಪರ ವಕೀಲ ಕೆ.ಬಿ.ಕೆ. ಸ್ವಾಮಿ, “ಈ ತೀರ್ಪು ಸತ್ಯದ ಗೆಲುವು. ನ್ಯಾಯಾಲಯವು ಎಲ್ಲಾ ದಾಖಲೆಗಳು, ಹೇಳಿಕೆಗಳು ಮತ್ತು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ನಿರ್ದೋಷಿ ತೀರ್ಪು ನೀಡಿದೆ” ಎಂದು ಹೇಳಿದ್ದಾರೆ.
ಪ್ರಕರಣದ ವಿಚಾರಣೆ ಹಲವು ತಿಂಗಳುಗಳ ಕಾಲ ನಡೆದಿದ್ದು, ಇದೀಗ ನ್ಯಾಯಾಲಯದ ತೀರ್ಪಿನಿಂದ ಸ್ವಾಮೀಜಿಗೆ ದೊಡ್ಡ ಶಾಂತಿ ಲಭಿಸಿರುವಂತಾಗಿದೆ.
