ಚಿತ್ರದುರ್ಗ (ಚಳ್ಳಕೆರೆ): ಚಳ್ಳಕೆರೆಯಲ್ಲಿ ಸರಣಿ ವಾಹನ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನೊಬ್ಬನನ್ನು ಬಂಧಿಸುವಲ್ಲಿ ಚಳ್ಳಕೆರೆ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಾರು ಹಾಗೂ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಎಸ್.ಆರ್. ರಸ್ತೆಯ ನಿವಾಸಿ ಜಗದೀಶ್ (37) ಬಂಧಿತ ಆರೋಪಿ. ಈತನಿಂದ ಅಂದಾಜು 7,16,000 ರೂ. ಮೌಲ್ಯದ 1 ಕಾರು ಹಾಗೂ 6 ದ್ವಿಚಕ್ರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಚಳ್ಳಕೆರೆ ನಗರದ ವಿವಿಧೆಡೆ ಕಾರು ಹಾಗೂ ಬೈಕ್ ಕಳ್ಳತನವಾಗಿರುವ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಹಲವು ದೂರುಗಳು ದಾಖಲಾಗಿದ್ದವು. ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಆರೋಪಿಗಳ ಪತ್ತೆಗೆ ಕಠಿಣ ಸೂಚನೆ ನೀಡಿದ್ದರು.
ಎಸ್ಪಿ ಅವರ ನಿರ್ದೇಶನದಂತೆ, ಡಿವೈಎಸ್ಪಿ ಎಂ.ಜೆ. ಸತ್ಯನಾರಾಯಣರಾವ್ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಕಾರ್ಯಾಚರಣೆಗಿಳಿದ ಪೊಲೀಸ್ ಇನ್ಸ್‌ಪೆಕ್ಟರ್ ಕೆ. ಕುಮಾರ್, ಪಿಎಸ್‌ಐಗಳಾದ ಶಿವರಾಜ್, ಈರೇಶ ಹಾಗೂ ಧರಪ್ಪ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವು ಖಚಿತ ವರ್ತಮಾನದ ಮೇರೆಗೆ ಆರೋಪಿ ಜಗದೀಶ್‌ನನ್ನು ಬಂಧಿಸಿದೆ.
ವಿಚಾರಣೆಯ ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
