ಮಂಗಳೂರು: ಬಜ್ಪೆ ಸಮೀಪದ ನೆಲ್ಲಿದಡಿಗುತ್ತುವಿನ ಜುಮಾದಿ ಬಂಟ ದೈವಸ್ಥಾನದಲ್ಲಿ ದೈವಾರಾಧನೆಗೆ ಎಸ್‌ಇಝೆಡ್ ಅಧಿಕಾರಿಗಳು ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ನೆಲ್ಲಿದಡಿಗುತ್ತುವಿನಲ್ಲಿ ಸಾಂಪ್ರದಾಯಿಕವಾಗಿ ನಡೆಯುವ ದೈವಾರಾಧನೆಗೆ ಕೇಂದ್ರ, ರಾಜ್ಯ ಸರಕಾರ ಹಾಗೂ ಎಸ್‌ಇಝೆಡ್ ಅವಕಾಶ ನೀಡಬೇಕು ಎಂದು ವಿಶ್ವಹಿಂದು ಪರಿಷತ್ ಆಗ್ರಹಿಸಿದೆ.
ನೆಲ್ಲಿದಡಿಗುತ್ತುವಿನ ದೈವಸ್ಥಾನಕ್ಕೆ ೮೦೦ ವರ್ಷಗಳ ಇತಿಹಾಸವಿದೆ. ಅಲ್ಲಿನ ತೀರ್ಥಬಾವಿಯ ನೀರು ದೈವಿಕ ನಂಬಿಕೆಯಂತೆ ಔಷಧವಾಗಿ ಬಳಸಲಾಗುತ್ತಿದೆ. ಅನೇಕ ಮಂದಿ ಅನಾರೋಗ್ಯ ಪೀಡಿತರು ತೀರ್ಥಬಾವಿಯ ನೀರಿನಿಂದ ಗುಣಮುಖರಾದ ದಾಖಲೆಯಿದೆ. ದೈವಸ್ಥಾನ ಇರುವ ಭೂಮಿಯನ್ನು ಎಸ್‌ಇಝೆಡ್‌ಗೆ ನೀಡಲು ಅಲ್ಲಿನ ದೈವಾರಾಧಕರು ಒಪ್ಪಿಗೆ ನೀಡಿರಲಿಲ್ಲ. ಪರಿಹಾರದ ಹಣವನ್ನೂ ಪಡೆದಿರಲಿಲ್ಲ. ಈಗ ಏಕಾಏಕಿ ದೈವದ ಆರಾಧನೆಗೆ ಎಸ್‌ಇಝೆಡ್ ಅಽಕಾರಿಗಳು ಅವಕಾಶ ನಿರಾಕರಣೆ ಮಾಡಿದ್ದಾರೆ. ಇಲ್ಲಿ ಭಕ್ತರಿಗೆ ದೈವಾರಾಧನೆಗೆ ಮುಕ್ತ ಅವಕಾಶ ನೀಡುವವರೆಗೆ ವಿಹಿಂಪ ಹೋರಾಟ ನಡೆಸಲಿದೆ ಎಂದು ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೈವಾರಾಧನೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ನೆಲ್ಲಿದಡಿಗುತ್ತು ಸಂರಕ್ಷಣಾ ವೇದಿಕೆ ವತಿಯಿಂದ ಮಾ.೧೮ರಂದು ಬಜ್ಪೆಯಿಂದ ದೈವಸ್ಥಾನದವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ವಿಹಿಂಪ, ಹಿಂದು ಸಂಘಟನೆಗಳು ಬೆಂಬಲ ನೀಡಲಿವೆ. ದೈವಾರಾಧನೆ ವಿಚಾರದಲ್ಲಿ ತುಳುನಾಡಿನಲ್ಲಿ ಸಂಘರ್ಷಕ್ಕೆ ಅವಕಾಶ ನೀಡಬೇಡಿ. ಈ ಹಿಂದೆ ಇಂತಹುದೇ ಪರಿಸ್ಥಿತಿ ಸೃಷ್ಟಿಯಾದಾಗ ಬಾಳ ಕಳವಾರು ಬೆಂಕಿನಾಥೇಶ್ವರ ದೇವಸ್ಥಾನವನ್ನು ವಿಹಿಂಪ ಹೋರಾಟದ ಮೂಲಕ ಉಳಿಸಿಕೊಂಡಿದೆ ಎಂದರು.