ಒಡಕಿನಧ್ವನಿ ಬೇಡ, ಕೇಂದ್ರಕ್ಕೆ ಸ್ಪಷ್ಟ ಸಂದೇಶ ಅಗತ್ಯ

0
23

ಕಾವೇರಿ ನೀರಿಗಾಗಿ ನಡೆಯುವ ಬಂದ್‌ನಲ್ಲಿ ಒಡಕಿನ ಧ್ವನಿ ಕೇಳಿಸಬಾರದು. ದೇವೇಗೌಡರು ಹೇಳಿರುವಂತೆ ಕೇಂದ್ರ ವಸ್ತುಸ್ಥಿತಿ ವರದಿಪಡೆದು ಸುಪ್ರೀಂಗೆ ಸಲ್ಲಸಬೇಕು.

ಕಾವೇರಿ ನೀರಿನ ಹಕ್ಕಿಗಾಗಿ ನಡೆಯುವ ಬಂದ್‌ನಿಂದ ಒಡಕಿನ ಸಂದೇಶ ರವಾನೆಯಾಗುವುದು ಬೇಡ. ಮಾಜಿ ಪ್ರಧಾನಿ ದೇವೇಗೌಡರು ಬರೆದಿರುವ ಪತ್ರದಂತೆ ಕೇಂದ್ರ ಸರ್ಕಾರ ಮೂರನೇ ರಾಜ್ಯದ ಅಧಿಕಾರಿಗಳ ತಂಡವನ್ನು ಕಳುಹಿಸಿ ವಸ್ತುಸ್ಥಿತಿ ವರದಿ ತರಿಸಿಕೊಂಡು ಅದನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಮಾಡಬೇಕು. ಇದಕ್ಕೆ ಆಡಳಿತ ಪಕ್ಷದ ಕಾಂಗ್ರೆಸ್ ಮತ್ತು ಪ್ರತಿಪಕ್ಷದಲ್ಲಿರುವ ಬಿಜೆಪಿ ಹಾಗೂ ಜೆಡಿಎಸ್ ಕೈಜೋಡಿಸಬೇಕು. ಪ್ರಧಾನಿ ಮೋದಿ ಅವರಿಗೆ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಗೌರವ ಮತ್ತು ಅಭಿಮಾನವಿದೆ. ಇದನ್ನು ಬಳಸಿಕೊಳ್ಳಬೇಕು. ದೇವೇಗೌಡರ ನೇತೃತ್ವದಲ್ಲಿ ಮೋದಿ ಹತ್ತಿರ ನಿಯೋಗ ಹೋಗಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಹಿಡಿದು ಎಲ್ಲರೂ ಹಿಂಜರಿಯಬಾರದು. ದೇವೇಗೌಡರ ರಾಜಕೀಯ ಅನುಭವ ಈಗ ನಮಗೆ ಸಿಕ್ಕಿರುವ ಅಮೂಲ್ಯ ಆಸ್ತಿ. ಅದನ್ನು ರಾಜ್ಯದ ಹಿತಕ್ಕೆ ಬಳಸಿಕೊಳ್ಳುವುದು ಮುಖ್ಯ ಇದಕ್ಕೆ ವೈಯಕ್ತಿಕ ಪ್ರತಿಷ್ಠೆಗಳು ಅಡ್ಡಿಯಾಗಬಾರದು. ಈಗ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿರುವುದರಿಂದ ಕೇಂದ್ರ ದೇವೇಗೌಡರ ಮಾತಿಗೆ ಕಿವಿಗೊಡುತ್ತದೆ. ಅದನ್ನು ಬಳಸಿಕೊಳ್ಳುವುದು ನಮ್ಮ ಸರ್ಕಾರದ ಕರ್ತವ್ಯ. ಇದುವರೆಗೆ ರಾಜ್ಯ ಸರ್ಕಾರ ಮಾಡಿದ ಎಲ್ಲ ಪ್ರಯತ್ನಗಳು ಫಲಕಾರಿಯಾಗಿಲ್ಲ. ರಾಜ್ಯದ ರೈತರ ಹಿತ ಕಾಪಾಡುವುದು ಮುಖ್ಯ ಎಂದರೆ ಎಲ್ಲ ಬಿಗುಮಾನಗಳನ್ನು ಬದಿಗಿಟ್ಟು ಎಲ್ಲರೂ ಕೈಜೋಡಿಸಬೇಕು. ಈಗ ಬಂದ್ ವಿಚಾರದಲ್ಲೂ ಒಮ್ಮತ ಮುಡಿಲ್ಲ. ರಾಷ್ಟ್ರೀಯ ಪಕ್ಷಗಳು ಒಂದೇ ಅಭಿಪ್ರಾಯ ತಳೆಯಲು ಸಾಧ್ಯವಾಗುತ್ತಿಲ್ಲ. ತಮಿಳುನಾಡಿನಲ್ಲಿ ಒಂದು ಅಭಿಪ್ರಾಯ, ಕರ್ನಾಟಕದಲ್ಲಿ ಮತ್ತೊಂದು ಅಭಿಪ್ರಾಯ ತಳೆದರೆ ಅದು ಜನರಿಗೆ ಒಟ್ಟಾರೆಯಾಗಿ ಜನರಿಗೆ ಮೋಸ ಮಾಡಿದಂತೆ. ಇದಕ್ಕೆ ಬದಲಾಗಿ ಎರಡೂ ರಾಜ್ಯಗಳ ಜನರೊಂದಿಗೆ ಚರ್ಚಿಸಿ ಒಮ್ಮತ ಮೂಡುವಂತೆ ಮಾಡುವುದರಲ್ಲಿ ರಾಷ್ಟ್ರೀಯ ಪಕ್ಷಗಳು ತೀರ್ಮಾನಿಸಬೇಕು. ಇದು ಭಾವನಾತ್ಮಕ ವಿಷಯವಾಗಬಾರದು. ಕಾವೇರಿ ಹರಿಯುವುದು ಎರಡೂ ರಾಜ್ಯಗಳ ಅಭಿವೃದ್ಧಿಗೇ ಹೊರತು ವಿಷ ಬೀಜ ಬಿತ್ತುವುದಕ್ಕಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರೀಯ ಪಕ್ಷವಾಗಿರುವುದರಿಂದ ಎರಡೂ ರಾಜ್ಯಗಳಲ್ಲಿ ಕಾವೇರಿ ವಿವಾದವನ್ನು ಬಹಿರಂಗವಾಗಿ ರಾಜಕೀಯ ಬದಿಗಿಟ್ಟು ಚರ್ಚಿಸಿ ಸಂಕಷ್ಟ ಸೂತ್ರರೂಪಿಸುವುದು ಕಷ್ಟವೇನಲ್ಲ. ಎರಡೂ ರಾಜ್ಯದ ಜನ ಇದನ್ನು ತಾವೇ ರೂಪಿಸಿಕೊಂಡಲ್ಲಿ ಸುಪ್ರೀಂ ಕೋರ್ಟ್ ಬೇಡ ಎನ್ನುವುದಿಲ್ಲ. ಆಂಧ್ರ ಮತ್ತು ತೆಲಂಗಾಣದ ನಡುವೆ ನೀರಿನ ಹಂಚಿಕೆ ವಿವಾದ ಸುಪ್ರೀಂ ಸಿಜೆ ಎನ್.ವಿ. ರಮಣ ಮುಂದೆ ಬಂದಾಗ ಅವರು ಎರಡೂ ರಾಜ್ಯಗಳ ನೇರವಾಗಿ ಮಾತುಕತೆ ನಡೆಸಬೇಕೆಂದು ಸೂಚಿಸಿದರು. ಕಾನೂನು ಮೂಲಕ ಇದನ್ನು ಬಗೆಹರಿಸುವುದು ಕಷ್ಟ ಎಂಬುದನ್ನು ಬಹಿರಂಗವಾಗಿ ಹೇಳಿದ್ದರು. ಈಗ ಕಾವೇರಿಗೂ ಇದೇ ಮಾತು ಅನ್ವಯವಾಗುತ್ತದೆ.
ಸರ್ಕಾರಗಳು ಬದಲಾಗಬಹುದು. ಆದರೆ ಎಲ್ಲ ರಾಜಕೀಯ ಪಕ್ಷಗಳ ನಿಲುವು ಬದಲಾಗಿಲ್ಲ. ಕಾವೇರಿಗೆ ರಾಜಕೀಯ ಪರಿಹಾರ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಅದರಿಂದ ಎರಡೂ ರಾಜ್ಯಗಳ ರೈತ ಮುಖಂಡರು. ಕೃಷಿ ವಿಜ್ಞಾನಿಗಳು, ಎಂಜಿನಿಯರ್‌ಗಳು, ವಕೀಲರು. ನಿವೃತ್ತ ನ್ಯಾಯಮೂರ್ತಿಗಳು ಸೇರಿ ರಾಜಕೀಯರಹಿತ ವೇದಿಕೆ ನಿರ್ಮಿಸಿಕೊಂಡು ಅಲ್ಲಿ ಸಂಕಷ್ಟ ಸೂತ್ರ ರೂಪಿಸಿ ನಂತರ ಎರಡೂ ಸರ್ಕಾರಗಳು ಅದಕ್ಕೆ ಒಪ್ಪಿಕೊಳ್ಳುವಂತೆ ಒತ್ತಡ ತಂದು ನಂತರ ಅದನ್ನು ಕೇಂದ್ರ ಮತ್ತು ಸುಪ್ರೀಂ ಕೋರ್ಟ್ಗೆ ಸಲ್ಲಿಸಿ ಅನುಮೋದನೆ ಪಡೆಯಬಹುದು. ಅದರಿಂದ ಶಾಶ್ವತ ಪರಿಹಾರ ಸಿಗಬಹುದು. ವರುಣನ ಕೃಪೆ ಇದ್ದಲ್ಲಿ ಯಾವ ಸಮಸ್ಯೆಯೂ ಬರುವುದಿಲ್ಲ. ಆದರೆ ಮಳೆ ಕೈಕೊಟ್ಟಾಗ ಎರಡೂ ರಾಜ್ಯಗಳ ನಡುವೆ ತಿಕ್ಕಾಟ ನಡೆಯುವುದು ಅನಿವಾರ್ಯ. ನದಿ ನೀರಿನಹಂಚಿಕೆಗೆ ಸ್ಪಷ್ಟ ಹಾಗೂ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ಯಾವ ದೇಶದಲ್ಲೂ ಸಾಧ್ಯವಾಗಿಲ್ಲ. ನದಿಯ ಕೆಳಪಾತ್ರದಲ್ಲಿರುವ ಹಾಗೂ ಈಗಾಗಲೇ ನೀರಾವರಿ ಅಭಿವೃದ್ಧಿಪಡಿಸಿಕೊಂಡಿರುವ ರಾಜ್ಯದ ಹಿತ ಕಾಯಬೇಕು ಎಂಬ ನಿಯಮ ಇದ್ದರೂ ಇದು ಸರ್ವಸಮ್ಮತವಾಗಿಲ್ಲ. ಇನ್ನೂ ಅಭಿವೃದ್ಧಿಯ ಹಾದಿಯಲ್ಲಿರುವ ರಾಜ್ಯಕ್ಕೆ ಅನ್ಯಾಯವಾಗುತ್ತದೆ. ಈಗಾಗಲೇ ಜಲ ಸಂಪನ್ಮೂಲ ಬಳಸಿಕೊಂಡು ಸುಖ ಸಮೃದ್ಧಿ ಕಂಡವರು ನೆಮ್ಮದಿಯಾಗಿರುತ್ತಾರೆ. ನೀರಿಲ್ಲದೆ ಹೊಸ ಬದುಕಿನ ಕನಸು ಕಾಣುತ್ತಿದ್ದವರು ಹಾಗೆ ಉಳಿಯಬೇಕಾಗುತ್ತದೆ.

Previous articleವಿಷಪೂರಿತ ಆಹಾರ ಸೇವನೆ: ನವೋದಯ ಶಾಲೆಯ ಮಕ್ಕಳು ಅಸ್ವಸ್ಥ
Next articleಹುಬ್ಬಳ್ಳಿಯಲ್ಲಿ ಯುವಕನ ಕೊಲೆ