ದಾವಣಗೆರೆ: ಖಾಸಗಿ ಜಮೀನಿನಲ್ಲಿ ಕಟ್ಟಿದ ಆಶ್ರಯ ಮನೆಗಳ ತೆರವು ಮಾಡಿ ಜಮೀನು ಮಾಲೀಕನಿಗೆ ಭೂಮಿ ವಾಪಸ್ಸು ಮಾಡಬೇಕು ಎಂದು ರಾಜ್ಯ ಹೈ ಕೋರ್ಟ್ ಆದೇಶ ನೀಡಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಮೀನು ಮಾಲೀಕ ರುದ್ರೇಶ್ ಅರಣಿ, 2002 ರಲ್ಲಿ ಸರ್ಕಾರ ಆಶ್ರಯ ಕಾಲೊನಿ ನಿರ್ಮಾಣ ಮಾಡುವಾಗ ನನ್ನ ಜಮೀನು ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡಲಾಗಿತ್ತು. ಅಂದಿನಿಂದ ಇಲ್ಲಿಯ ತನಕ ನಾನು ಹೋರಾಟ ಮಾಡಿಕೊಂಡು ಬಂದಿದ್ದೇನೆ. ಇದೀಗ ಉಚ್ಚ ನ್ಯಾಯಾಲಯ ತೀರ್ಪು ನೀಡಿ ಮಾ.5 ರ ಒಳಗೆ ಜಮೀನು ವಾಪಸ್ ನೀಡುವ ಕುರಿತು ಜಿಲ್ಲಾಡಳಿತ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ತಿಳಿಸಲು ಸೂಚಿಸಿದೆ ಎಂದರು.
ಹಾಲಿ ನನ್ನ ಜಮೀನಿನಲ್ಲಿ 136 ಆಶ್ರಯ ಮನೆ ನಿರ್ಮಾಣ ಮಾಡಲಾಗಿದೆ. ಈ ಹಿಂದೆ ಒಮ್ಮೆ ಜಿಲ್ಲಾಡಳಿತ ಶಾಮನೂರು ಬಳಿ 5 ಎಕರೆ ಜಮೀನು ನೀಡಲು ಒಪ್ಪಿಗೆ ನೀಡಿದ್ದರು. ಆದರೆ, ಅದು ಕಾರ್ಯಗತ ಆಗಲಿಲ್ಲ.
ಇದೀಗ ಹೈಕೋರ್ಟ್ ಸೂಚನೆ ಮೇರೆಗೆ ಜಿಲ್ಲಾ ನ್ಯಾಯಾಲಯ ಜಿಲ್ಲಾ ನ್ಯಾಯಾಲಯಕ್ಕೆ ಸೂಚನೆ ನೀಡಿ, ಹೈ ಕೋರ್ಟ್ ಆದೇಶ ಜಾರಿ ಮಾಡಲು ಸೂಚಿಸಿದೆ. ಜಿಲ್ಲಾ ನ್ಯಾಯಾಲಯ ಮಾ.5 ರ ಒಳಗೆ ಯಾವ ಕ್ರಮ ವಹಿಸಲಾಗಿದೆ ಎಂಬುದನ್ನು ತಿಳಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದೆ.