ಹುಬ್ಬಳ್ಳಿ: ಕೆಲವರಿಗೆ ಸ್ಪರ್ಧೆ ಎಂದರೆ ಸ್ಪರ್ಧೆ ಅಷ್ಟೇ. ಅಲ್ಲಿ ಮಂಚೂಣಿಯಲ್ಲಿ ಸಾಗಿ ಗೆಲ್ಲುವುದಷ್ಟೇ ಗುರಿ. ಆದರೆ, ದೂರ ದೇಶದ ಅಲ್ಲೊಬ್ಬ ಬಾಲಕಿ ಸೈಕಲ್ ರೇಸ್‌ನಲ್ಲಿ ಭಾಗಿಯಾಗಿ ಗೆಲ್ಲುವ ಜೊತೆಗೆ ಭಾರತದಲ್ಲಿನ ಮಕ್ಕಳ ಶಿಕ್ಷಣಕ್ಕಾಗಿ ರೇಸ್‌ನುದ್ದಕ್ಕೂ ದೇಣಿಗೆ ಸಂಗ್ರಹಿಸುವ ಮೂಲಕ ಸಾಮಾಜಿಕ ಕಾಳಜಿ ಮೆರೆದಿದ್ದು, ಜಾಗತಿಕ ಮಟ್ಟದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಾಲಕಿ ಮಾಡಿದ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತೀಯರಂತೂ ಹೆಮ್ಮೆಯಿಂದ ಈ ಬಾಲಕಿ ಸಾಧನೆ ಕಂಡು ಹೃದಯತುಂಬಿ ಹರಸಿದ್ದಾರೆ.

ಬಾಲಕಿ ಬೇರಾರೂ ಅಲ್ಲ; ಜಾನ್ಯಾ ಪಾಠಕ್. ಪೋರ್ಟ್ಲ್ಯಾಂಡ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಕುಟುಂಬದ ಕುವರಿ. ಈ ಬಾಲಕಿಗೀಗ ಕೇವಲ ೮ ವರ್ಷ. ಈಚೆಗೆ ಸಿಯಾಟಲ್- ಪೋರ್ಟಲ್ಯಾಂಡ್‌ವರೆಗೆ ಸಿಯಾಟಲ್ ಟು ಪೋರ್ಟ್ಲ್ಯಾಂಡ್ ರೈಡ್' ಎಂಬ ಸೈಕಲ್ ರ‍್ಯಾಲಿ ಆಯೋಜಿಸಿತ್ತು. ೨೦೬ ಮೈಲ್ ದೂರದ ಈ ಸೈಕಲ್ ರ‍್ಯಾಲಿಯಲ್ಲಿ ೬೦೦೦ ಸೈಕ್ಲಿಸ್ಟ್ಗಳು ಭಾಗವಹಿಸಿದ್ದುರ. ಪೋರ್ಟ್ಲ್ಯಾಂಡ್‌ನಲ್ಲಿ ನೆಲೆಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಮೂಲದ, ಕರ್ನಾಟಕ ಹಲವರು ಪಾಲ್ಗೊಂಡಿದ್ದರು. ಇದರಲ್ಲಿ ೮ ವರ್ಷ ಜಾನ್ಯಾ ಪಾಠಕ್ ಕೂಡಾ ಒಬ್ಬಳು. ಸೈಕಲ್ ರೇಸ್‌ನಲ್ಲಿ ಪಾಲ್ಗೊಂಡಿದ್ದ ಬಹುತೇಕರು ಸೈಕಲ್ ತುಳಿದು ರೇಸ್ ಕಂಪ್ಲೀಟ್ ಮಾಡಿದರೆ ಈ ಬಾಲಕಿ ಮಾಡಿದ್ದು ವಿಭಿನ್ನ ಆಲೋಚನೆ. ಭಾರತೀಯ ಮೂಲದ ಈಕೆಯ ಮನ ಭಾರತದಲ್ಲಿನ ಶಿಕ್ಷಣ ವಂಚಿತ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಲು ಮಿಡಿದಿದೆ. ಅದಕ್ಕಾಗಿ
ಆಶಾ ಫಾರ್ ಎಜ್ಯುಕೇಶನ್’ ಎಂಬ ಘೋಷ ವಾಕ್ಯದಡಿ ಈ ಸೈಕಲ್ ರೇಸ್‌ನುದ್ದಕ್ಕೂ ಅಲ್ಲಿನ ಜನರಿಂದ ದೇಣಿಗೆ ಸಂಗ್ರಹಿಸಿದ್ದಾರೆ. ಬಾಲಕಿಯ ಸಾಮಾಜಿಕ ಕಾಳಜಿ ಗುಣವನ್ನು ಕಂಡು ಬೆರಗಾದ ಅಲ್ಲಿನ ಜನರು ದೇಣಿಗೆ ನೀಡಿ ಪ್ರೋತ್ಸಾಹಿಸಿದ್ದಾರೆ ಎಂದು ಪೋರ್ಟ್ ಲ್ಯಾಂಡಿನ ಕೊಯಿನ್ ನ್ಯೂಸ್ ಸುದ್ದಿ ವಾಹಿನಿ ವರದಿ ಮಾಡಿದೆ