ಕಲಬುರಗಿ: ಹಫ್ತಾ ನೀಡುವಂತೆ ಸತಾಯಿಸುತ್ತಿದ್ದ ನಾಲ್ವರ ವ್ಯಕ್ತಿಗಳ ಕಿರುಕುಳಕ್ಕೆ ಬೇಸತ್ತು ಅಂಗವಿಕಲ ಅಭಿವೃದ್ಧಿ ಇಲಾಖೆಯ ಗ್ರಾಮೀಣ ಪುನರವಸತಿ ಕಾರ್ಯಕರ್ತನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಲಬುರಗಿಯ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಗುರುವಾರ ನಡೆದಿದೆ.
ಅಫಜಲಪುರ ತಾಲೂಕಿನ ಉಡಚಣ ಗ್ರಾಮ ಪಂಚಾಯತಿ ಗ್ರಾಮೀಣ ಪುನರವಸತಿ ಕಾರ್ಯಕರ್ತ, ವಿಕಲಚೇತನ ಅಣವೀರ ಗೌಡಗಾಂವ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿಯಾಗಿದ್ದು, ಅಫಜಲಪುರ ಗ್ರಾಮ ಪಂಚಾಯತಿ ಜಬ್ಬರ ಅಲಿ, ಬೈರಮಡಗಿ ಪಂಚಾಯತಿಯ ಜಬ್ಬರ ಅಲಿ, ಕೊಗನೂರ್ ವಿಜಯಕುಮಾರ್, ಖನೀಫ್ ಜಮಾದಾರ ಅವರು ಆಯಾ ಗ್ರಾಮಪಂಚಾಯತಿಯಲ್ಲಿ ವಿ ಆರ್ ಡಬ್ಲೂ ಆಗಿ ಸೇವೆಸಲ್ಲಿಸುತ್ತಿದ್ದು. ಇವರಿಗೆ ಬಸವರಾಜ್ ಹಡಪದ್, ಸಂಘರಾಜ್ ವಾಲಿಕರ್, ಶಾಂತಪ್ಪ ಹಾಗೂ ಅಂಬರೀಶ್ ಎಂಬ ನಾಲ್ವರು ಹಫ್ತಾ ನೀಡುವಂತೆ ಹಾಗೂ ಕೇಲಸದಿಂದ ತೆಗೆದು ಹಾಕುವಂತೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಡಪದ್ ಕೂಡ ಈ ಮುಂಚೆ ವಿ ಆರ್ ಡಬ್ಲೂ ಆಗಿ ಸೇವೆಸಲ್ಲಿಸುತ್ತಿದ್ದ ಎನ್ನಲಾಗಿದೆ. ಈತ ಸಹ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
ಈ ನಾಲ್ವರು ಕಿರುಕುಳ ನೀಡುತ್ತಿರುವುದರಿಂದ ಬೇಸತ್ತು ಡಿಸಿ ಅವರಿಗೆ ಮನವಿ ಸಲ್ಲಿಸಲು ಆಗಮಿಸಿದ ವೇಳೆ ಅಣವೀರ ಗೌಡಗಾಂವ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಪಕ್ಕದಲ್ಲೇ ಇದ್ದ ಸಹೋದ್ಯೋಗಿ ರಕ್ಷಿಸಿದ್ದಾರೆ. ಸದ್ಯ ಆತ್ಮಹತ್ಯೆಗೆ ಯತ್ನಿಸಿ ವಿಕಲಚೇತನ ಅಣವೀರ ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
