ಹುಬ್ಬಳ್ಳಿ: ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ವಿಚಾರ ಜೆಡಿಎಸ್‌ನಲ್ಲಿ ದ್ವಂದ್ವ ನಿಲುವು ಇದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದ್ದಾರೆ.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ವಿಚಾರದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ್ರು ಒಂದು ಮಾತು ಹೇಳುತ್ತಾರೆ. ಇತ್ತ ಕುಮಾರಸ್ವಾಮಿ ಅವರು ಒಂದು ಮಾತು ಹೇಳುತ್ತಿದ್ದಾರೆ. ಬಿಜೆಪಿ ನಾಯಕರು ಸಹ ಒಂದಲ್ಲ ಒಂದು ರೀತಿಯ ಹೇಳಿಕೆ ಕೊಡತ್ತಿದ್ದಾರೆ. ಹೀಗಾಗಿ ಮೈತ್ರಿ ಮಾಡಿಕೊಳ್ಳುತ್ತಾರೋ ಬಿಡುತ್ತಾರೋ ಅದು ಅವರಿಗೆ ಬಿಟ್ಟ ವಿಚಾರ. ಈ ಹಿಂದೆ ಜೆಡಿಎಸ್‌ನವರು ಕಾಂಗ್ರೆಸ್ ಮತ್ತು ಬಿಜೆಪಿಯೊಂದಿಗೆ ಸಮಾನ ಅಂತರ ಕಾಪಾಡುವುದಾಗಿ ಹೇಳಿದ್ದರು. ಈಗ ಮೈತ್ರಿ ವಿಚಾರ ಮುನ್ನೆಲೆಗೆ ಬಂದಿದ್ದು ಎರಡು ಪಕ್ಷದವರು ಸ್ಪಷ್ಟಪಡಿಸಬೇಕು ಎಂದರು.
ವಿಧಾನಸಭೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಬಲಾಢ್ಯ ಪಕ್ಷವಾಗಿದೆ. ಜನರಿಗೆ ಕೊಟ್ಟ ಭರವಸೆ ಈಡೇರಿಸಿದೆ. ಜನಪರವಾದ ಆಡಳಿತ ಮಾಡುತ್ತಿದೆ. ಇದರ ಪರಿಣಾಮ ಮುಂಬುರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನಗಳಿಸುತ್ತದೆ ಎಂದು ಎಂದರು.
ಇನ್ನೂ ಎನ್‌ಡಿಎ ವಿರುದ್ಧದ ಪಕ್ಷಗಳು ಒಂದುಗೂಡಬೇಕು ಎಂಬ ಅಭಿಪ್ರಾಯಕ್ಕೆ ಬೆಂಗಳೂರಿನಲ್ಲಿ ದೊಡ್ಡ ಶಕ್ತಿ ಸಿಕ್ಕಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್
ನೇತೃತ್ವದಲ್ಲಿ ದೊಡ್ಡ ಶಕ್ತಿ ವೃದ್ಧಿಯಾಗುತ್ತದೆ ಎಂದರು.
ಸಿಎಂ ಸ್ಥಾನಕ್ಕೆ ಏರಿಸೋದು ಅಥವಾ ಇಳಿಸುವುದು ಹೇಗೆ ಅನ್ನೋದು ನನಗೆ ಗೊತ್ತಿದೆ ಎಂಬ ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆ ವಿಚಾರ ಈ ಕುರಿತು ನಾನು ಹೆಚ್ಚಿಗೆ ಕಾಮೆಂಟ್ ಮಾಡಲ್ಲ. ಕಾಂಗ್ರೆಸ್ ಪಕ್ಷದ ವರಿಷ್ಠರು ಅದರ ಬಗ್ಗೆ ಸಮಾಲೋಚನೆ ಮಾಡುತ್ತಾರೆ ಎಂದರು.